ದಿಲ್ಲಿಯಲ್ಲಿ ಕೊನೆಯ ಕ್ಷಣದಲ್ಲಿ ಮುಸ್ಲಿಮರ ಮತಗಳು ಕಾಂಗ್ರೆಸ್ ಪಾಲಾದವು: ಕೇಜ್ರಿವಾಲ್

Update: 2019-05-18 17:07 GMT

ಹೊಸದಿಲ್ಲಿ, ಮೇ 18: ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯಲ್ಲಿ ಮುಸ್ಲಿಮರ ಮತಗಳು ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಪಾಲಾದವು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹೇಳಿದ್ದಾರೆ.

ದಿಲ್ಲಿಯಲ್ಲಿ ಮತದಾನಕ್ಕೆ 48 ಗಂಟೆಗಳ ಮೊದಲಿನವರೆಗೂ ಎಲ್ಲ ಏಳೂ ಕ್ಷೇತ್ರಗಳು ಆಪ್‌ಗೆ ದೊರೆಯಲಿವೆ ಎಂಬಂತೆ ಕಂಡು ಬರುತ್ತಿತ್ತು, ಆದರೆ ಕೊನೆಯ ಘಳಿಗೆಯಲ್ಲಿ ಮುಸ್ಲಿಮರ ಅಷ್ಟೂ ಮತಗಳು ಕಾಂಗ್ರೆಸ್‌ಗೆ ಬಿದ್ದಿವೆ. ಆಗಿದ್ದೇನು ಎನ್ನುವುದನ್ನು ತಿಳಿದುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು.

ಲೋಕಸಭಾ ಚುನಾವಣೆಯ ಆರನೇ ಹಂತದಲ್ಲಿ ಮೇ 12ರಂದು ದಿಲ್ಲಿಯ ಎಲ್ಲ ಏಳೂ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು.

ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ದಿಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಶೀಲಾ ದೀಕ್ಷಿತ್ ಅವರು,ಪ್ರತಿಯೊಬ್ಬ ವ್ಯಕ್ತಿಯೂ ತಾನು ಬಯಸಿದ ಪಕ್ಷಕ್ಕೆ ಮತ ನೀಡುವ ಹಕ್ಕನ್ನು ಹೊಂದಿರುತ್ತಾನೆ. ಜನರು ಕೇಜ್ರಿವಾಲ್ ಅವರ ಆಡಳಿತ ಮಾದರಿಯನ್ನು ಇಷ್ಟಪಟ್ಟಿರಲಿಲ್ಲ ಎಂದರು.

 ಮುಂದಿನ ವರ್ಷ ನಡೆಯಲಿರುವ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷದ ಭವಿಷ್ಯದ ಕುರಿತು ಆಶಾವಾದ ವ್ಯಕ್ತಪಡಿಸಿದ ಕೇಜ್ರಿವಾಲ್,ನಾವು ಮಾಡಿರುವ ಕೆಲಸಗಳ ಆಧಾರದಲ್ಲಿ ಜನರು ನಮಗೆ ಮತ ನೀಡಲಿದ್ದಾರೆ ಎಂದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಹಿತ ಸಮ್ಮಿಶ್ರ ಸರಕಾರ ಕುರಿತಂತೆ ಅವರು,ದಿಲ್ಲಿಗೆ ಪೂರ್ಣ ರಾಜ್ಯ ಸ್ಥಾನಮಾನದ ಪೂರ್ವಷರತ್ತಿನೊಂದಿಗೆ ನಾವು ಸರಕಾರವನ್ನು ಬೆಂಬಲಿಸುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News