ರತ್ನಮಂಜರಿ: ಮೇಕಿಂಗ್ ಒಂದೇ ಭರ್ಜರಿ!

Update: 2019-05-18 18:10 GMT

ಚಿತ್ರ: ರತ್ನಮಂಜರಿ
 
ತಾರಾಗಣ: ರಾಜ್ ಚರಣ್, ಅಖಿಲಾ ಪ್ರಕಾಶ್,ಶ್ರದಾ ಸಾಲ್ಯಾನ್, ಪಲ್ಲವಿ ರಾಜು
 ನಿರ್ದೇಶನ: ಪ್ರಸಿದ್ಧ್
 ನಿರ್ಮಾಣ: ಎಸ್‌ಎನ್‌ಎಸ್ ಸಿನೆಮಾಸ್ ಯುಎಸ್‌ಎ

ಹೌದು; ಮೇಕಿಂಗ್ ಚೆನ್ನಾಗಿ ಮಾಡಿ ಕತೆಯಲ್ಲಿ ಏನೇನೂ ಹುರುಳಿಲ್ಲದ ಚಿತ್ರ ಮಾಡುವುದು ಹೇಗೆ ಎಂದು ತಿಳಿಯಬೇಕಾದರೆ ನೀವು ರತ್ನ ಮಂಜರಿ ಚಿತ್ರವನ್ನೊಮ್ಮೆ ನೋಡಲೇಬೇಕು! ರಂಗಿ ತರಂಗದಂಥ ಚಿತ್ರ ಮಾಡುತ್ತೇನೆ ಎಂದು ಹೇಳಿಕೊಂಡೇ ಬಂದ ಎನ್‌ಆರ್‌ಐ ನಿರ್ದೇಶಕ ಪ್ರಸಿದ್ಧ್ ಕೊಟ್ಟ ಮಾತಿಗೆ ತಪ್ಪಿಲ್ಲ. ರಂಗಿತರಂಗದ ಒಂದು ಕಲರ್‌ಫುಲ್ ಜೆರಾಕ್ಸ್‌ ಮಾಡಿಟ್ಟು ಹೋಗಿದ್ದಾರೆ. ಅಂದರೆ ಅದರಲ್ಲಿದ್ದ ಬಣ್ಣಗಳಿಗೆ ಇಲ್ಲಿಯೂ ಕೊರತೆಯಿಲ್ಲ. ಆದರೆ ಅಲ್ಲಿದ್ದ ಜೀವ ಸೆಲೆಗೆ ಕೊರತೆ ಎದ್ದು ಕಾಣುತ್ತದೆ.

ಚಿತ್ರ ಶುರುವಾಗುವುದು ವಿದೇಶದಲ್ಲಿರುವ ಪ್ರೇಮ ಜೋಡಿಯ ವಿವಾಹದ ಮೂಲಕ. ನವ ವಿವಾಹಿತರಾದ ಸಿದ್ಧಾಂತ್ ಮತ್ತು ಗೌರಿ ಹೊಸದೊಂದು ಬಂಗಲೆ ಖರೀದಿಸಿ ಅದರಲ್ಲಿ ವಾಸವಿರುತ್ತಾರೆ. ಅದು ಭೂತ ಬಂಗಲೆ ಎಂಬ ಮಾತಿರುತ್ತದೆ. ಆದರೆ ಅಲ್ಲಿ ಅಂಥ ವಿಶೇಷಗಳೇನೂ ನಡೆಯುವುದಿಲ್ಲ. ಆದರೆ ಅಲ್ಲಿ ಸೇರಿಕೊಂಡ ಮೇಲೆ ಸಿದ್ಧಾಂತ್‌ಗೆ ಪದೇ ಪದೇ ತನ್ನ ತವರಾದ ಕೊಡಗಿನ ಮನೆದೇವರು ಕನಸಲ್ಲಿ ಬರುತ್ತಿರುತ್ತಾರೆ. ಹಾಗೆ ದೇವರ ದರ್ಶನಕ್ಕೆಂದು ತವರು ಸೇರುತ್ತಾನೆ. ಆದರೆ ಮರಳಿ ವಿದೇಶ ತಲುಪಿದಾಗ ತನ್ನ ಮನೆಯ ಪಕ್ಕದಲ್ಲೇ ವಾಸವಾಗಿದ್ದ ಕೊಡಗಿನ ಹಿರಿಯ ದಂಪತಿಯ ಕೊಲೆಯಾಗಿರುವುದು ತಿಳಿದು ಬರುತ್ತದೆ. ಆ ಕೊಲೆಗೂ ಕೊಡಗಿಗೂ ಸಂಬಂಧ ಇರುವಂತೆ ಸಿದ್ಧಾಂತನಿಗೆ ಅನಿಸತೊಡಗುತ್ತದೆ. ಅದರ ಅನ್ವೇಷಣೆಗೆಂದೇ ಕೊಡಗು ಸೇರುತ್ತಾನೆ ಅಲ್ಲಿ ನಡೆಯುವ ಘಟನೆಗಳೇನು ಎನ್ನುವುದೇ ಚಿತ್ರ ಮುಂದಿನ ಕತೆ.

ಚಿತ್ರದಲ್ಲಿ ಪ್ರಥಮ ಆಕರ್ಷಣೆಯಾಗಿ ಮೂಡಿ ಬಂದಿರುವುದೇ ಪ್ರೀತಂ ತೆಗ್ಗಿನಮನೆ ನಿರ್ವಹಿಸಿರುವ ಛಾಯಾಗ್ರಹಣ. ಅದಕ್ಕೆ ತಕ್ಕಂತೆ ನೀಡಲಾಗಿರುವ ಹಿನ್ನೆಲೆ ಸಂಗೀತ, ಮೊದಲ ಹಾಡು, ಅದರ ನೃತ್ಯ ನಿರ್ದೇಶನ, ಗ್ರಾಫಿಕ್ಸ್ ಎಲ್ಲವೂ ಒಂದನ್ನೊಂದು ಮೀರುವ ಹಾಗೆ ಇಷ್ಟವಾಗುತ್ತಾ ಹೋಗುತ್ತದೆ. ಸಿದ್ಧಾಂತ್ ಪಾತ್ರದ ಮೂಲಕ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿರುವ ರಾಜ್ ಚರಣ್ ತಕ್ಕಮಟ್ಟಿಗೆ ಚೆಲುವನೇ. ಸಿದ್ಧಾಂತನ ಪಾತ್ರಕ್ಕೆ ಹೊಂದುವಂಥ ಅಭಿನಯವನ್ನು ಕೂಡ ಅವರು ನೀಡಿದ್ದಾರೆ. ತಮಗೆ ನೀಡಲಾಗಿರುವ ಸ್ಮೈಲಿಂಗ್ ಕ್ವೀನ್ ಬಿರುದಿಗೆ ತಕ್ಕಂತೆ ಗೌರಿ ಪಾತ್ರದಲ್ಲಿ ಅಖಿಲಾ ಪ್ರಕಾಶ್ ನಕ್ಕು ಸುಮ್ಮನಾಗಿದ್ದಾರೆ. ಇದೇನಪ್ಪ ರತ್ನ ಮಂಜರಿ ಎನ್ನುವ ಹೆಸರಿದ್ದರೂ ನಾಯಕಿಗೆ ವಿಶೇಷ ಅವಕಾಶಗಳಿಲ್ಲ ಎಂದು ಯೋಚಿಸುತ್ತಿರಬೇಕಾದರೆ ಕೊಡಗಿನಲ್ಲಿ ಕೂಡ ಎರಡು ಮಹಿಳಾ ಪಾತ್ರಗಳು ದೊರಕುತ್ತವೆ. ಉಳಿದ ಇಬ್ಬರು ನಾಯಕಿಯರಾಗಿ ಶ್ರದ್ಧಾ ಸಾಲ್ಯಾನ್ ಮತ್ತು ಪಲ್ಲವಿ ರಾಜು ಗಮನ ಸೆಳೆದಿದ್ದಾರೆ.

ಗೌಡರ ಮನೆಕೆಲಸದ ಹುಡುಗಿಯಾಗಿ ಪಲ್ಲವಿ ರಾಜು ಗಂಧದ ಗುಡಿಯ ಕಲ್ಪನಾರ ಪಾತ್ರವನ್ನು ನೆನಪಿಸುವಂತೆ ಬರುತ್ತಾರೆ. ಆದರೆ ಅಂಥ ಯಾವುದೇ ಭಾವವೈವಿಧ್ಯತೆ ತೋರಿಸದೆ ಮಾಯವಾಗುತ್ತಾರೆ. ಶ್ರದ್ಧಾ ಸಾಲ್ಯಾನ್ ಅವರು ಕನ್ನಿಕಾ ಪಾತ್ರಕ್ಕೆ ಜೀವ ತುಂಬುವಂತೆ ನಟಿಸಿದ್ದಾರೆ. ಅವರಿಗೆ ಕೂಡ ಕೆಲವೇ ದೃಶ್ಯಗಳಾದರೂ ರತ್ನಮಂಜರಿ ಎನ್ನುವ ಶೀರ್ಷಿಕೆಗೆ ಒಪ್ಪುವಂಥ ಪಾತ್ರ ಮಾಡಿದ್ದಾರೆ ಎನ್ನಬಹುದು. ಚಿತ್ರದಲ್ಲಿರುವ ತೊಂಬತ್ತೊಂಬತ್ತು ಭಾಗ ಕಲಾವಿದರು ಕೂಡ ಹೊಸಮುಖಗಳಾಗಿ ಕಂಡರೂ ವೃತ್ತಿಪರವಾದ ಅಭಿನಯ ನೀಡಿರುವುದು ಸಿನೆಮಾಗೆ ಹೊಸತನ ತುಂಬುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿ ಕೊಡಗಿನ ಚೆಲುವಿನ ಜೊತೆಯಲ್ಲೇ ಒಂದಷ್ಟು ಸಂಪ್ರದಾಯ, ನೃತ್ಯ ಮೊದಲಾದವನ್ನು ತೋರಿಸುವ ಪ್ರಯತ್ನಕ್ಕೆ ನಿರ್ದೇಶಕರು ಕೈ ಹಾಕಿದ್ದಾರೆ.

ಮೇಲ್ನೋಟಕ್ಕೆ ಹಾರರ್ ಚಿತ್ರದಂತೆ ಕಂಡು ಬಂದರೂ ಮನುಷ್ಯ ಸಂಬಂಧಗಳ ಬಗ್ಗೆಯೇ ಕತೆ ಸಾಗುತ್ತದೆ. ಆದರೆ ದೆವ್ವಗಳ ಮತ್ತು ಅಪರಾಧಿಯ ಹುಡುಕಾಟದಲ್ಲಿ ಒಂದಷ್ಟು ಹೊತ್ತು ವೃಥಾ ಕಾಲಹರಣ ಮಾಡುವ ದೃಶ್ಯಗಳು ಚಿತ್ರಕ್ಕೆ ಭಾರವಾಗಿವೆ. ಹಾಗೆ ನೋಡಿದರೆ ನಿರ್ದೇಶಕರೇ ಹೋಲಿಸಿಕೊಳ್ಳುವ ರಂಗಿತರಂಗ ಚಿತ್ರ ಕೂಡ ಫ್ಲ್ಯಾಷ್ ಬ್ಯಾಕ್ ಕತೆಗಳ ಗೊಂದಲ ಮತ್ತು ಕರಾವಳಿಯ ದೈವಗಳ ಸಂಪ್ರದಾಯವನ್ನು ಬಿಟ್ಟು ಬೇರೇನನ್ನೂ ಹೇಳಿರಲಿಲ್ಲ. ಇಲ್ಲಿ ಕೊಡಗನ್ನು ಆರಿಸಿಕೊಂಡಿರುವ ನಿರ್ದೇಶಕರು ಪ್ರದೇಶ ಮತ್ತು ಆಚರಣೆಯನ್ನು ಹೊಸ ಕಲಾವಿದರೊಂದಿಗೆ ಉಣ ಬಡಿಸಿದ್ದಾರೆಯೇ ಹೊರತು ಬೇರೆ ವಿಶೇಷವೇನನ್ನೂ ಹೇಳಿಲ್ಲ. ಒಟ್ಟಿನಲ್ಲಿ ಇದೊಂದು ಸದಭಿರುಚಿಯ ಸಂಗೀತಮಯ ಚಿತ್ರ ಎನ್ನುವುದನ್ನು ಹೊರತುಪಡಿಸಿದರೆ ಅದರಾಚೆಗೆ ಬೇರೇನೂ ನಿರೀಕ್ಷೆ ಇರಿಸಿಕೊಳ್ಳಲಾಗದಂಥ ಚಿತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News