ರಫೆಲ್ ನಡಾಲ್ ಫೈನಲ್‌ಗೆ ಪ್ರವೇಶ

Update: 2019-05-18 18:30 GMT

ರೋಮ್, ಮೇ 18:ಹಾಲಿ ಚಾಂಪಿಯನ್ ರಫೆಲ್ ನಡಾಲ್ ಇಟಾಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

 ಶನಿವಾರ ಇಲ್ಲಿ ನಡೆದ ಮೊದಲ ಸೆಮಿ ಫೈನಲ್ ಹಣಾಹಣಿಯಲ್ಲಿ 8 ಬಾರಿಯ ಇಟಾಲಿಯನ್ ಓಪನ್ ಚಾಂಪಿಯನ್ ನಡಾಲ್ ಗ್ರೀಕ್‌ನ ಉದಯೋನ್ಮುಖ ಆಟಗಾರ ಸ್ಟೆಫನೊಸ್ ಸಿಟ್‌ಸಿಪಾಸ್‌ರನ್ನು 6-3, 6-4 ನೇರ ಸೆಟ್‌ಗಳಿಂದ ಮಣಿಸಿದರು. ಈ ಮೂಲಕ ಈ ಋತುವಿನಲ್ಲಿ ಕ್ಲೇ ಕೋರ್ಟ್ ನಲ್ಲಿ ಮೊದಲ ಬಾರಿ ಫೈನಲ್‌ಗೆ ತಲುಪಿದರು.

ಒಂದು ಗಂಟೆ, 42 ನಿಮಿಷಗಳ ಕಾಲ ನಡೆದ ಅಂತಿಮ-4ರ ಪಂದ್ಯದಲ್ಲಿ ಒಂದೂ ಸೆಟನ್ನು ಕೈಚೆಲ್ಲದ ನಡಾಲ್ ಮುಂದಿನ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಅಥವಾ ಅರ್ಜೆಂಟೀನದ ಡಿಯಾಗೊ ಸ್ಚೆವರ್ಟ್‌ಮನ್ ಸವಾಲನ್ನು ಎದುರಿಸಲಿದ್ದಾರೆ.

4ನೇ ಶ್ರೇಯಾಂಕದ ನಡಾಲ್ ಸತತ 4ನೇ ಬಾರಿ ಸೆಮಿ ಫೈನಲ್ ಪಂದ್ಯ ಆಡಿದರು. ಇನ್ನೊಂದು ವಾರದಲ್ಲಿ ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ಆರಂಭವಾಗಲಿರುವ ಫ್ರೆಂಚ್ ಓಪನ್‌ನಲ್ಲಿ 12ನೇ ಬಾರಿ ಪ್ರಶಸ್ತಿ ಜಯಿಸುವತ್ತ ನಡಾಲ್ ಚಿತ್ತ ಹರಿಸಿದ್ದಾರೆ.

  ನಡಾಲ್ ಕ್ವಾರ್ಟರ್ ಫೈನಲ್ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಫೆರ್ನಾಂಡೊ ವೆರ್ಡಾಸ್ಕೊರನ್ನು 6-0, 6-0 ನೇರ ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ತಲುಪಿದ್ದರು.

ಸ್ವಿಸ್ ಸ್ಟಾರ್ ರೋಜರ್ ಫೆಡರರ್ ಬಲಗಾಲಿನ ಗಾಯದ ಸಮಸ್ಯೆಯಿಂದಾಗಿ ಕ್ವಾರ್ಟರ್ ಫೈನಲ್‌ನಿಂದ ಹಿಂದೆ ಸರಿದ ಕಾರಣ ಸಿಟ್‌ಸಿಪಾಸ್ ಸೆಮಿಗೆ ತಲುಪಿದ್ದರು.

32ರ ಹರೆಯದ ನಡಾಲ್ ಸಿಟ್‌ಸಿಪಾಸ್‌ಗೆ ಕಳೆದ ವಾರ ನಡೆದ ಮ್ಯಾಡ್ರಿಡ್ ಓಪನ್ ಸೆಮಿ ಫೈನಲ್‌ನಲ್ಲಿ ಸೋತಿದ್ದರು. ಇದೀಗ ಆ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.

► ಜೊಕೊವಿಕ್ ಸೆಮಿ ಫೈನಲ್‌ಗೆ ಲಗ್ಗೆ

ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಇಟಾಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ಮಾಜಿ ಅಮೆರಿಕನ್ ಓಪನ್ ಚಾಂಪಿಯನ್ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ 4-6, 7-6(8/6), 6-4 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

15 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಅರ್ಜೆಂಟೀನದ ಡಿಯಾಗೊ ಸ್ಚೆವಾರ್ಟ್ ಮನ್‌ರನ್ನು ಎದುರಿಸಲಿದ್ದಾರೆ. ಡಿಯಾಗೊ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಆರನೇ ಶ್ರೇಯಾಂಕದ ಕೀ ನಿಶಿಕೊರಿ ಅವರನ್ನು 6-4, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

► ಟೂರ್ನಿಯಿಂದ ಹಿಂದೆ ಸರಿದ ಒಸಾಕಾ: ಇದೇ ವೇಳೆ ಹಾಲಿ ಅಮೆರಿಕನ್ ಹಾಗೂ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ನವೊಮಿ ಒಸಾಕಾ ಬಲಗೈ ನೋವಿನಿಂದಾಗಿ ಇಟಾಲಿಯನ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಆಡದೇ ಹಿಂದೆ ಸರಿದರು. ಒಸಾಕಾ ಎದುರಾಳಿ ಮ್ಯಾಡ್ರಿಡ್ ಓಪನ್ ಚಾಂಪಿಯನ್ ಕಿಕಿ ಬೆರ್ಟೆನ್ಸ್ ಸೆಮಿಫೈನಲ್‌ಗೆ ತಲುಪಿದ್ದಾರೆ. ಆರನೇ ಶ್ರೇಯಾಂಕದ ಬೆರ್ಟೆನ್ಸ್ ಮುಂದಿನ ಸುತ್ತಿನಲ್ಲಿ ಬ್ರಿಟನ್‌ನ ಜೊಹನ್ನಾ ಕಾಂಟಾರನ್ನು ಎದುರಿಸಲಿದ್ದಾರೆ. ಕಾಂಟಾ ಝೆಕ್‌ನ ಮಾರ್ಕೆಟಾ ವಂಡ್ರೊಸೋವಾರನ್ನು 6-3, 3-6, 6-1 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

ಇಬ್ಬರು ಮಾಜಿ ನಂ.1 ಆಟಗಾರ್ತಿಯರಾದ ಕರೊಲಿನಾ ಪ್ಲಿಸ್ಕೋವಾ ಹಾಗೂ ವಿಕ್ಟೋರಿಯ ಅಝರೆಂಕಾ ಮಧ್ಯೆ ನಡೆದ ಹಣಾಹಣಿಯಲ್ಲಿ ಪ್ಲಿಸ್ಕೋವಾ 6-7(5/7), 6-2, 6-2 ಸೆಟ್‌ಗಳಿಂದ ಜಯ ಸಾಧಿಸಿದರು. ಝೆಕ್‌ನ 4ನೇ ಶ್ರೇಯಾಂಕದ ಪ್ಲಿಸ್ಕೋವಾ ಮುಂದಿನ ಸುತ್ತಿನಲ್ಲಿ ಗ್ರೀಸ್‌ನ ಮರಿಯಾ ಸಕ್ಕಾರಿ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News