ಧ್ಯಾನಸ್ಥ ಮೋದಿಯವರಿಂದ ಹೀಗೊಂದು ಪತ್ರಿಕಾಗೋಷ್ಠಿ!

Update: 2019-05-18 18:30 GMT

ಪ್ರಧಾನಿ ಮೋದಿಯವರು ಪತ್ರಿಕಾಗೋಷ್ಠಿ ಕರೆದಿದ್ದಾರೆನ್ನುವ ಮಾಹಿತಿ ದೊರಕಿದ್ದೇ, ಪತ್ರಕರ್ತ ಎಂಜಲು ಕಾಸಿ ಅತ್ತಕಡೆ ದಾವಿಸಿದ. ಪತ್ರಿಕಾಗೋಷ್ಠಿಯಲ್ಲಿ ಅಮಿತ್ ಶಾ ಅವರ ಪಕ್ಕದಲ್ಲಿ ನರೇಂದ್ರ ಮೋದಿಯವರು ಆಸೀನರಾಗಿರುವುದನ್ನು ನೋಡಿ ಆತನಲ್ಲಿ ಆನಂದಭಾಷ್ಪ ತುಂಬಿ ಬಂತು. ಪತ್ರಕರ್ತರೆಲ್ಲರೂ ಭಯಭಕ್ತಿಯಿಂದ ಮೋದಿಯನ್ನೇ ನೋಡುತ್ತಿದ್ದರು. ಅವರ ಮುಖಭಾವದಲ್ಲೂ ಧನ್ಯತೆ ಎದ್ದು ಕಾಣುತ್ತಿತ್ತು.
‘‘ನರೇಂದ್ರ ಮೋದಿಯವರು ಪತ್ರಿಕಾಗೋಷ್ಠಿ ಕರೆದು ತಮ್ಮ ದರ್ಶನ ನೀಡುವುದಿಲ್ಲ ಎನ್ನುವುದು ಕಳೆದ ಐದು ವರ್ಷಗಳಿಂದ ಪತ್ರಕರ್ತರ ಮೊರೆಯಾಗಿತ್ತು. ಇದೀಗ ಪ್ರಧಾನಮಂತ್ರಿಯವರಿಗೆ ತಮ್ಮ ಭಕ್ತರ ಮೊರೆ ಕೇಳಿಸಿದೆ. ಹಾಗಾಗಿ ಪತ್ರಕರ್ತರಿಗೆ ತಮ್ಮ ದರ್ಶನ ನೀಡಲು ಬಂದಿದ್ದಾರೆ...’’ ಅಮಿತ್ ಶಾ ವಿವರಿಸಿದರು.
ಸೇರಿದ ಪತ್ರಕರ್ತರೆಲ್ಲ ‘ಮೋದಿ...ಮೋದಿ...ಮೋದಿ...’’ ಎಂದು ಮಂತ್ರ ಜಪಿಸತೊಡಗಿದರು. ಎಂಜಲುಕಾಸಿಗೆ ಗೊಂದಲ. ಪತ್ರಕರ್ತರ ಬದಲು ಕಾರ್ಯಕರ್ತರನ್ನೇ ತಂದು ಕೂರಿಸಿದ್ದಾರೆಯೋ....ಎಂದು ಬಾಗಿಲ ಕಡೆಗೆ ಒಮ್ಮೆ ನೋಡಿದ. ಅಲ್ಲಿ ಬಾಗಿಲಿಗೆ ಬೀಗ ಜಡಿಯಲಾಗಿತ್ತು. ಪ್ರಶ್ನೆ ಕೇಳಿ ಓಡಿ ಹೋಗುವಂತಿಲ್ಲ ಎನ್ನುವುದು ಆತನಿಗೆ ಮನವರಿಕೆಯಾಯಿತು.
ಸರಕಾರದ ಸಾಧನೆಗಳನ್ನು ಮೋದಿಯವರು ಎಂದಿನಂತೆ ವಿವರಿಸತೊಡಗಿದರು. ಚಹಾ ಮಾರಿದ್ದು, ಹಿಮಾಲಯಕ್ಕೆ ಹೋಗಿದ್ದು, ಮಾವಿನ ಹಣ್ಣ ತಿಂದದ್ದು, ಡಿಜಿಟಲ್ ಕ್ಯಾಮರಾ ಕಂಡು ಹಿಡಿದದ್ದು, ಇಮೇಲ್ ಸಂಶೋಧನೆ ಮಾಡಿದ್ದು, ರೇಡಾರ್ ಕಂಡು ಹಿಡಿದದ್ದು....ಹೀಗೆ ಐದು ವರ್ಷಗಳಲ್ಲಿ ಪ್ರಧಾನಿಯಾಗಿ ಅವರು ವಿಶ್ವಕ್ಕೆ ಕೊಟ್ಟ ಕೊಡುಗೆಯನ್ನು ಎಂದಿನಂತೆ ಭಜಿಸಲಾಯಿತು. ಇದಾದ ಬಳಿಕ ಪತ್ರಕರ್ತರ ಜೊತೆಗೆ ಪ್ರಶ್ನೋತ್ತರ. ಇದ್ದಕ್ಕಿದ್ದಂತೆಯೇ ಮೋದಿಯವರು ಕಣ್ಮುಚ್ಚಿ ವೌನವಾದರು.
‘‘ಸಾರ್...ಮೋದೀಜಿಯವರ ಬಳಿ ಪ್ರಶ್ನೆ....’’ ಕಾಸಿ ಬಾಯಿ ತೆರೆದದ್ದೇ ಉಳಿದ ಪತ್ರಕರ್ತರು ಆತನನ್ನು ಟೆರರಿಸ್ಟ್‌ನನ್ನು ನೋಡುವಂತೆ ಕೆಕ್ಕರಿಸಿ ನೋಡ ತೊಡಗಿದರು.
ಈಗ ಅಮಿತ್ ಶಾ ಬಾಯಿ ತೆರೆದರು ‘‘ನೋಡಿ...ಮೋದೀಜಿಯವರು ಧ್ಯಾನಸ್ಥರಾಗಿದ್ದಾರೆ...ಇನ್ನೇನಿದ್ದರೂ ನೀವು ಪ್ರಶ್ನೆ ಕೇಳಿ. ಅವರು ನನ್ನ ಮೂಲಕ ಉತ್ತರಿಸುತ್ತಾರೆ....’’
‘‘ಅದು ಹೇಗೆ ಸಾರ್?’’ ಕಾಸಿ ಅರ್ಥವಾಗದೆ ಕೇಳಿದ.
‘‘ನೋಡ್ರೀ...ಅವರು ಏನು ಯೋಚಿಸುತ್ತಾರೆಯೋ ಅದನ್ನು ಅವರು ನನ್ನ ನಾಲಗೆಯ ಮೂಲಕ ಮಾತನಾಡುತ್ತಾರೆ....’’ ಅಮಿತ್ ಶಾ ವಿವರಿಸಿದರು.
‘‘ಅವರ ನಾಲಗೆಯ ಮೂಲಕ ಯಾಕೆ ಮಾತನಾಡುವುದಿಲ್ಲ ಸಾರ್...?’’
‘‘ನೋಡಿ...ಮೋದಿಯವರು ಸರ್ವಾಂತರ್ಯಾಮಿ....ಈಗ ಅವರು ಯಾವ ದೇಶದಲ್ಲಿ ಅಲೆದಾಡುತ್ತಿದ್ದಾರೋ...ಯಾವು ದೇಶದ ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆಯೋ ಹೇಳುವುದಕ್ಕಾಗುವುದಿಲ್ಲ. ಆದರೂ ಮೋದಿಯವರು ಪತ್ರಿಕಾಗೋಷ್ಠಿಯನ್ನೇ ನಡೆಸಿಲ್ಲ ಎಂಬ ಆರೋಪ ಬೇಡವೆಂದು ತಮ್ಮೆಲ್ಲ ಕೆಲಸದ ನಡುವೆಯೇ ಹೀಗೊಂದು ಪತ್ರಿಕಾಗೋಷ್ಠಿಯ ವ್ಯವಸ್ಥೆಯನ್ನು ಮಾಡಿದ್ದಾರೆ...ನಾನು ಮಾತನಾಡಿದ್ದನ್ನು ಅವರೇ ಉತ್ತರಿಸಿದ್ದಾರೆ ಎಂದು ತಿಳಿದುಕೊಂಡು ನೀವೆಲ್ಲ ಪ್ರಸಾದವಾಗಿ ಸ್ವೀಕರಿಸಬೇಕು....’’ ಅಮಿತ್ ಶಾ ವಿವರಿಸಿದರು.
 ‘‘ಸಾರ್...ನೋಟು ನಿಷೇಧ....’’ ಕಾಸಿ ಬಾಯಿ ತೆರೆಯುತ್ತಿದ್ದಂತೆಯೇ ಮೋದಿ ಕೈಯನ್ನು ಅಮಿತ್ ಶಾ ಅವರ ಕಡೆಗೆ ತೋರಿಸಿದರು. ‘‘ನಮ್ಮದು ಪ್ರಾಮಾಣಿಕ ಸರಕಾರ....ನೋಟು ನಿಷೇಧದ ಎಲ್ಲ ಅನಾಹುತಕ್ಕೆ ಕಾಂಗ್ರೆಸ್ ಕಾರಣ....ಮೋದಿಯವರು ಮಾವಿನ ಹಣ್ಣು ತಿನ್ನುವ ಕಾಲಕ್ಕೆ ಸಾವಿರ, ಐನೂರು ರೂಪಾಯಿಯ ನೋಟೇ ಇರಲಿಲ್ಲ. ಆ ನೋಟನ್ನು ಜಾರಿಗೆ ತಂದಿರುವುದು ಕಾಂಗ್ರೆಸ್ ಪಕ್ಷ. ಅದಕ್ಕಾಗಿ ಅದನ್ನು ನಿಷೇಧಿಸಿ ಎರಡು ಸಾವಿರ ರೂಪಾಯಿ ನೋಟನ್ನು ಜಾರಿಗೆ ತಂದಿದ್ದೇವೆ....’’
‘‘ಕಪ್ಪು ಹಣ....’’ ಪ್ರಶ್ನೆ ಪೂರ್ತಿಯಾಗುವ ಮೊದಲೇ ಮೋದಿಯವರು ಎರಡೂ ಕಾಲನ್ನು ಮೇಲೆತ್ತಿ ಧ್ಯಾನಸ್ಥರಾದರು. ಅಮಿತ್ ಶಾ ಅವರು ಮಾತನಾಡತೊಡಗಿದರು ‘‘ನೋಡಿ....ನೋಟಿನಲ್ಲಿರುವ ಎಲ್ಲ ಕಪ್ಪು ಬಣ್ಣಗಳನ್ನು ತೆಗೆದು ಕೆಂಪು, ಹಳದಿ, ನೀಲಿ ಬಣ್ಣಗಳಾಗಿ ಪರಿವರ್ತಿಸಿದ್ದೇವೆ. ಇದೀಗ ಕಪ್ಪು ನೋಟುಗಳೇ ಇಲ್ಲ. ಈಗ ಇರುವ ಅಳಿದುಳಿದ ಕಪ್ಪು ಬಣ್ಣದ ನೋಟುಗಳನ್ನೆಲ್ಲ ನಿಧಾನಕ್ಕೆ ಬೇರೆ ಬೇರೆ ಬಣ್ಣಗಳಿಗೆ ಪರಿವರ್ತಿಸಲಿದ್ದೇವೆ. ಅದಕ್ಕಾಗಿ ಇನ್ನೂ ಐದು ವರ್ಷ ನಮಗೆ ಅಧಿಕಾರ ಬೇಕಾಗಿದೆ....’’
‘‘ಸಾರ್...ಸರ್ಜಿಕಲ್ ಸ್ಟ್ರೈಕ್....ರೇಡಾರ್...ಮೋಡ...’’ ಈ ಪ್ರಶ್ನೆ ಬಂದದ್ದೇ ಮೋದಿಯವರು ತನ್ನೆರಡೂ ಕಾಲುಗಳ ಮಧ್ಯೆ ತಲೆಯನ್ನು ತೂರಿಸಿ ಧ್ಯಾನಸ್ಥರಾದರು. ಅಮಿತ್ ಬೆವರೊರೆಸಿಕೊಳ್ಳುತ್ತಾ ಮುಂದುವರಿಸಿದರು ‘‘ನೋಡಿ ರೇಡಾರ್ ಕುರಿತಂತೆ ನಮ್ಮ ಸರಕಾರದ ಶೋಧನೆಯನ್ನು ವಿಶ್ವವೇ ಮಾನ್ಯ ಮಾಡಿದೆ. ಆದರೆ ಕಾಂಗ್ರೆಸ್ ಗುಲಾಮರು ಇನ್ನೂ ಒಪ್ಪಿಕೊಂಡಿಲ್ಲ. ರೇಡಾರ್ ಗುರುತಿಸದ ಕಾರಣಕ್ಕಾಗಿಯೇ ಬಾಲಕೋಟ್‌ನಲ್ಲಿ ನಮಗೆ ಉಗ್ರರ ಮೃತದೇಹಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ....ಮೋದಿಯವರು ಶೀಘ್ರದಲ್ಲಿ ಬೇರೆ ಬೇರೆ ಪುಣ್ಯ ಕ್ಷೇತ್ರಗಳಲ್ಲಿ ಧ್ಯಾನಸ್ಥರಾಗಲಿದ್ದಾರೆ...ಅದಕ್ಕಾಗಿ ಪತ್ರಿಕಾಗೋಷ್ಠಿಯನ್ನು ಬೇಗ ಮುಗಿಸಬೇಕಾಗಿದೆ...’’
 ‘‘ಸಾರ್ ಗೋಡ್ಸೆ....’’ ಈ ಪದ ಕೇಳಿ ಬಂದದ್ದೇ ಮೋದಿಯವರು ತಮ್ಮ ದೇಹವನ್ನು ಹಾವಿನಾಕಾರದಲ್ಲಿ ಸುರುಳಿ ಸುತ್ತಿ ಧ್ಯಾನಸ್ಥರಾದರು. ಅಮಿತ್ ಶಾ ಅವರು ಮೋದಿಯ ಕಡೆಗೊಮ್ಮೆ ನೋಡಿ ಮತ್ತೆ ಬೆವರೊರೆಸಿಕೊಂಡರು ‘‘ಗೋಡ್ಸೆ ದೇಶಭಕ್ತನೋ ಅಥವಾ ದೇಶದ್ರೋಹಿಯೋ ಎನ್ನುವುದನ್ನು ಪತ್ತೆ ಹಚ್ಚಲು ಎನ್‌ಐಎಯಿಂದ ಒಂದು ತಂಡವನ್ನು ರಚನೆ ಮಾಡಲಾಗಿದೆ. ಅಲ್ಲಿಯವರೆಗೆ ಪ್ರಜ್ಞಾ ಸಿಂಗ್ ಠಾಕೂರ್ ಬಿಜೆಪಿಯ ಅಭ್ಯರ್ಥಿಯಾಗಿಯೇ ಮುಂದುವರಿಯಲಿದ್ದಾರೆ. ಆದರೆ ಮೋದಿಯವರು ಪ್ರಜ್ಞಾರನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ. ಇದು ಆಕೆಗೆ ಅತಿ ದೊಡ್ಡ ಶಿಕ್ಷೆ....ಇದಕ್ಕಿಂತಲೂ ದೊಡ್ಡ ಶಿಕ್ಷೆಯನ್ನು ನೀಡಿದರೆ ಅದು ಅಮಾನವೀಯವಾಗುತ್ತದೆ...ಗಾಂಧೀಜಿಯವರು ಖಂಡಿತವಾಗಿಯೂ ಅದನ್ನು ಒಪ್ಪುತ್ತಿರಲಿಲ್ಲ...ಪತ್ರಿಕಾಗೋಷ್ಠಿ ಮುಗಿಯಿತು...ಇನ್ನು ಪತ್ರಕರ್ತರು ಫೋಟೋ ತೆಗೆಯಬಹುದು....’’ ಎಂದು ಘೋಷಣೆ ಮಾಡುತ್ತಿದ್ದಂತೆಯೇ ಮೋದಿಯವರು ಧ್ಯಾನದಿಂದ ಹೊರಬಂದು ಛಾಯಾಗ್ರಾಹಕರ ಕಡೆಗೆ ವಿವಿಧ ಭಂಗಿಯಲ್ಲಿ ಕೈ ಬೀಸತೊಡಗಿದರು.

Writer - *ಚೇಳಯ್ಯ chelayya@gmail.com

contributor

Editor - *ಚೇಳಯ್ಯ chelayya@gmail.com

contributor

Similar News