ತನ್ನ ಹತ್ಯೆ ಸಾಧ್ಯತೆ ಕುರಿತ ಕೇಜ್ರಿವಾಲ್ ಹೇಳಿಕೆ ಪೊಲೀಸರ ನೈತಿಕ ಸ್ಥೈರ್ಯಕ್ಕೆ ಹಾನಿಕಾರಕ: ಬಿಜೆಪಿ

Update: 2019-05-19 16:25 GMT

ಹೊಸದಿಲ್ಲಿ,ಮೇ 19: ತನ್ನ ರಕ್ಷಣೆಗಾಗಿ ನಿಯೋಜಿಸಲಾಗಿರುವ ಪೊಲೀಸರಿಂದಲೇ ತನ್ನ ಹತ್ಯೆ ನಡೆಯಬಹುದು ಎಂಬ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯು ಅವರ ಭದ್ರತಾ ಸಿಬ್ಬಂದಿಗಳು ಮತ್ತು ಪೊಲೀಸ್ ಪಡೆಯ ನೈತಿಕ ಸ್ಥೈರ್ಯಕ್ಕೆ ಅತ್ಯಂತ ಹಾನಿಕಾರಕವಾಗಿದೆ ಎಂದು ದಿಲ್ಲಿ ಬಿಜೆಪಿ ಘಟಕವು ನಗರದ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರಿಗೆ ರವಿವಾರ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಕೇಜ್ರಿವಾಲ್ ಅವರ ಭದ್ರತೆಯನ್ನು ಪುನರ್‌ಪರಿಶೀಲಿಸುವಂತೆಯೂ ಅದು ಕೋರಿಕೊಂಡಿದೆ. ಅದು ಗೃಹಸಚಿವ ರಾಜನಾಥ್ ಸಿಂಗ್ ಮತ್ತು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೂ ಪತ್ರದ ಪ್ರತಿಗಳನ್ನು ರವಾನಿಸಿದೆ.

ಬಿಜೆಪಿಯು ತನ್ನ ಜೀವದ ಹಿಂದೆ ಬಿದ್ದಿದೆ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಂತೆ ತಾನೂ ತನ್ನ ಭದ್ರತೆಗಾಗಿ ನಿಯೋಜಿತ ಪೊಲೀಸರಿಂದಲೇ ಕೊಲೆಯಾಗಬಹುದು ಎಂದು ಕೇಜ್ರಿವಾಲ್ ಶನಿವಾರ ಆರೋಪಿಸಿದ್ದರು.

ಮುಖ್ಯಮಂತ್ರಿಗಳ ಈ ಹೇಳಿಕೆ ಅವರ ಭದ್ರತಾ ಸಿಬ್ಬಂದಿಗಳಿಗೆ ಮಾತ್ರವಲ್ಲ,ವಿಐಪಿ ಭದ್ರತೆಗಾಗಿ ನಿಯೋಜಿತರಾಗಿರುವ ಇಡೀ ದಿಲ್ಲಿ ಪೊಲೀಸ್ ಪಡೆ ಸಿಬ್ಬಂದಿಗಳ ನೈತಿಕ ಸ್ಥೈರ್ಯಕ್ಕೆ ಹಾನಿಯನ್ನುಂಟು ಮಾಡುತ್ತಿದೆ ಎಂದು ಪತ್ರದಲ್ಲಿ ತಿಳಿಸಿರುವ ಬಿಜೆಪಿ ವಕ್ತಾರ ಪ್ರವೀಣ ಶಂಕರ ಕಪೂರ್ ಅವರು, ಕೇಜ್ರಿವಾಲ್ ಆರೋಪದಿಂದ ಅವರ ಭದ್ರತಾ ಸಿಬ್ಬಂದಿ ಖಿನ್ನತೆಗೊಳಗಾಗಿರಬೇಕು,ಹೀಗಾಗಿ ಅವರಿಗೆ ಮಾನಸಿಕ ಕೌನ್ಸೆಲಿಂಗ್ ಕೊಡಿಸಬೇಕು ಮತ್ತು ಕೇಜ್ರಿವಾಲ್‌ರ ಭದ್ರತೆಯನ್ನು ಪುನರ್‌ಪರಿಶೀಲಿಸಬೇಕು ಎಂದು ಹೇಳಿದ್ದಾರೆ.

ತನ್ನ ಆರೋಪಗಳಿಗಾಗಿ ಕ್ಷಮೆ ಯಾಚಿಸುವಂತೆ ದಿಲ್ಲಿ ಪೊಲೀಸರು ಕೇಜ್ರಿವಾಲ್‌ಗೆ ಸೂಚಿಸಬೇಕು ಮತ್ತು ಅವರು ನಿರಾಕರಿಸಿದರೆ ಭದ್ರತೆಯನ್ನು ಹಿಂದೆಗೆದುಕೊಳ್ಳಬೇಕು ಎಂದೂ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News