ಸಲಿಂಗ ಸಂಬಂಧ ಬಹಿರಂಗಪಡಿಸಿದ ಓಟಗಾರ್ತಿ ದ್ಯುತಿ ಚಂದ್

Update: 2019-05-19 18:39 GMT

ಹೊಸದಿಲ್ಲಿ, ಮೇ 19: ತನ್ನ ತವರು ಪಟ್ಟಣದ ಯುವತಿಯೊಂದಿಗೆ ತನಗೆ ಸಲಿಂಗ ಸಂಬಂಧವಿದೆ ಎಂದು ಏಶ್ಯನ್ ಗೇಮ್ಸ್‌ನಲ್ಲಿ ಎರಡು ಬಾರಿ ಬೆಳ್ಳಿ ಪದಕ ವಿಜೇತೆ, ಭಾರತದ 100 ಮೀ.ಓಟದ ಚಾಂಪಿಯನ್ ದ್ಯುತಿ ಚಂದ್ ಬಹಿರಂಗಪಡಿಸಿದ್ದಾರೆ.

23ರ ಹರೆಯದ ಚಂದ್ ತನಗೆ ಸಲಿಂಗ ಸಂಬಂಧವಿದೆ ಎಂದು ಬಹಿರಂಗಪಡಿಸಿದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

  ‘‘ನನ್ನ ಹಳ್ಳಿಯ 19ರ ಹರೆಯದ ಯುವತಿಯೊಂದಿಗೆ ಕಳೆದ 5 ವರ್ಷಗಳಿಂದ ಸಂಬಂಧ ಇಟ್ಟುಕೊಂಡಿದ್ದೇನೆ. ಆ ಯುವತಿ ಭುವನೇಶ್ವರದಲ್ಲಿ ದ್ವಿತೀಯ ವರ್ಷದ ಬಿಎ ಓದುತ್ತಿದ್ದಾಳೆ. 2018ರ ಸೆಪ್ಟಂಬರ್‌ನಲ್ಲಿ ಸುಪ್ರೀಂಕೋರ್ಟ್ ತನ್ನ ಐತಿಹಾಸಿಕ ತೀರ್ಪಿನಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಆ ಬಳಿಕ ನಾವಿಬ್ಬರು ಒಟ್ಟಿಗೆ ಇರುವುದರಿಂದ ತೊಂದರೆಯಿಲ್ಲ ಎಂಬ ತೀರ್ಮಾನಕ್ಕೆ ಬಂದೆವು. ನಾವು ಮದುವೆಯಾಗಿ ಒಟ್ಟಿಗೆ ಬಾಳಲು ನಿರ್ಧರಿಸಿದ್ದೇವೆ’’ ಎಂದು ದ್ಯುತಿ ಚಂದ್ ಹೇಳಿದ್ದಾರೆ.

   ‘‘ನಾನು ಸಂಬಂಧ ಇಟ್ಟುಕೊಂಡಿರುವ ಯುವತಿ ಕ್ರೀಡಾಪ್ರೇಮಿಯಾಗಿದ್ದಾಳೆ. ಕ್ರೀಡೆಯಲ್ಲಿ ನೆಲೆಕಾಣಲು ನಾನು ಎಷ್ಟೊಂದು ಹೋರಾಡಿದ್ದೇನೆಂಬ ವಿಚಾರ ಆಕೆ ತಿಳಿದುಕೊಂಡಿದ್ದಾಳೆ. ನನ್ನ ಜೀವನಕತೆಯಿಂದ ಪ್ರೇರೇಪಿತಳಾಗಿದ್ದಾಗಿ ಆಕೆ ತಿಳಿಸಿದ್ದಾಳೆ. ಹಾಗಾಗಿ ನಾವಿಬ್ಬರೂ ಸಂಪರ್ಕದಲ್ಲಿದ್ದೆವು. ನಮ್ಮ ಸಂಬಂಧ ಅಪರಾಧವಲ್ಲ. ಇದು ನಮ್ಮ ಜೀವನ ಹಾಗೂ ನಮಗೆ ಸರಿಯೆನಿಸಿದ ಹಾಗೆ ಜೀವನ ನಡೆಸುವ ಹಕ್ಕು ನಮಗಿದೆ. ನಾನು ದೇಶದ ಪರ ಆಡುತ್ತಿರುವ ಕಾರಣ ಸಾರ್ವಜನಿಕರ ಕಣ್ಣಿಗೆ ಬೀಳುತ್ತಿದ್ದೇನೆ. ಕ್ರೀಡೆಯಿಂದ ನಿವೃತ್ತಿಯಾದ ಬಳಿಕ ನನಗೂ ಸಾಕಷ್ಟು ಜೀವನವಿರುತ್ತದೆ’’ಎಂದರು.

ಮನೆಯಲ್ಲಿ ಹಿರಿಯ ಸಹೋದರಿಯ ಆಕ್ಷೇಪ

ತನ್ನ ಹಳ್ಳಿಯ ಯುವತಿಯೊಂದಿಗೆ ಸಂಬಂಧ ಹೊಂದಿರುವುದಕ್ಕೆ ದ್ಯುತಿ ಚಂದ್ ಹೆತ್ತವರು ಈತನಕ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ, ಆಕೆಯ ಅಕ್ಕ ಆಕ್ಷೇಪ ವ್ಯಕ್ತಪಡಿಸಿದ್ದು, ಜೈಲಿಗೆ ಅಟ್ಟುವ ಬೆದರಿಕೆ ಹಾಕಿದ್ದಾರೆ. ಈ ವಿಚಾರವನ್ನು ಸ್ವತಃ ದ್ಯುತಿ ಬಹಿರಂಗಪಡಿಸಿದರು. ‘‘ನನ್ನ ಹಿರಿಯಕ್ಕನಿಗೆ ನನ್ನ ಕುಟುಂಬದಲ್ಲಿ ಹೆಚ್ಚಿನ ಅಧಿಕಾರವಿದೆ. ಅಣ್ಣನ ಹೆಂಡತಿ ತನಗಿಷ್ಟವಿಲ್ಲವೆಂಬ ಕಾರಣಕ್ಕೆ ಅಣ್ಣನನ್ನು ಮನೆಯಿಂದ ಹೊರಹಾಕಿದ್ದಾಳೆ. ನನಗೂ ಅದೇ ಗತಿ ಬರುತ್ತದೆ ಎಂದು ಬೆದರಿಸಿದ್ದಾಳೆ. ಆದರೆ, ನಾನು ಪ್ರಬುದ್ದಳಾಗಿದ್ದೇನೆ. ನನ್ನ ಜೊತೆಗಾರ್ತಿ ನನ್ನ ಆಸ್ತಿಯ ಮೇಲೆ ಕಣ್ಣಿಟ್ಟಿದ್ದಾಳೆ ಎಂದು ನನ್ನ ಅಕ್ಕನ ಆರೋಪವಾಗಿದೆ. ಆಕೆಯೊಂದಿಗೆ ಸಂಬಂಧ ಹೊಂದಿರುವುದಕ್ಕೆ ನನ್ನನ್ನು ಜೈಲಿಗೆ ಕಳುಹಿಸುವುದಾಗಿ ನನ್ನ ಅಕ್ಕ ಬೆದರಿಸಿದ್ದಾಳೆ’’ ಎಂದು ಚಂದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News