​ಬೆಳೆ ಹಾನಿ ಸಮೀಕ್ಷೆಗೆ ಇನ್ನು ಹೈಟೆಕ್ ವಿಧಾನ

Update: 2019-05-20 03:52 GMT

ಹೊಸದಿಲ್ಲಿ: ಬೆಳೆ ವಿಮೆ ಯೋಜನೆಯ ಕ್ಲೇಮ್‌ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ಬೆಳೆ ಇಳುವರಿಯನ್ನು ಗ್ರಾಮ/ ಪಂಚಾಯತ್ ಮಟ್ಟದಲ್ಲಿ ನಡೆಸಲು ವಿಶೇಷ ಪರಿಣತಿಯ ಏಜೆನ್ಸಿಗಳನ್ನು ನಿಯೋಜಿಸಿಕೊಳ್ಳಲು ಕೃಷಿ ಸಚಿವಾಲಯ ನಿರ್ಧರಿಸಿದೆ.

ಸಚಿವಾಲಯದ ಈ ಕ್ರಮದಿಂದಾಗಿ ಇಳುವರಿಯನ್ನು ತ್ವರಿತವಾಗಿ ಹಾಗೂ ನಿಖರವಾಗಿ ಅಂದಾಜಿಸಲು ಸಾಧ್ಯವಾಗಲಿದೆ.

ಮುಂದಿನ ಹಿಂಗಾರು ಹಂಗಾಮಿನ ಬೆಳೆಗಳಿಗೆ ಪ್ರಾಯೋಗಿಕವಾಗಿ ನೂತನ ವಿಧಾನ ಅನುಸರಿಸಲು ನಿರ್ಧರಿಸಲಾಗಿದ್ದು, 2020ರ ಫೆಬ್ರವರಿಯ ಒಳಗಾಗಿ ಈ ಕುರಿತ ವರದಿ ಸಲ್ಲಿಕೆಯಾಗಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಬೆಳೆ ಇಳುವರಿಯನ್ನು ಅಂದಾಜಿಸಲು ಹೈಸ್ಪೇಶಿಯೊ ಟೆಂಪೊರಲ್ ರಿಮೋಟ್ ಸೆನ್ಸಿಂಗ್ ಡಾಟಾ, ಮಾನವ ರಹಿತ ವೈಮಾನಿಕ ವಾಹನಗಳು, ಮೆಷಿನ್ ಲರ್ನಿಂಗ್, ಅತ್ಯಾಧುನಿಕ ಇಂಟೆಲಿಜೆನ್ಸ್ ಬೆಳೆ ಸಿಮ್ಯುಲೇಶನ್ ಮಾದರಿಗಳು ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ಈ ಕುರಿತ ಪ್ರಾಯೋಗಿಕ ಅಧ್ಯಯನಕ್ಕೆ ಸಚಿವಾಲಯ ಈಗಾಗಲೇ ಆಸಕ್ತಿಯ ಅಭಿವ್ಯಕ್ತಿಗಾಗಿ ಪರಿಣತ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಆರಂಭಿಕವಾಗಿ ಬತ್ತ, ಸೋಯಾಬಿನ್, ಹತ್ತಿ, ಬಾಜ್ರಾ, ಮೆಕ್ಕೆಜೋಳ, ಹುಲ್ಲುಜೋಳ, ಶೇಂಗಾ ಮತ್ತು ಗೋರಿಕಾಯಿ ಬೆಳೆಗಳ ಇಳುವರಿ ಅಂದಾಜಿಸಲು ಈ ವಿಧಾನ ಅನುಸರಿಸಲಾಗುತ್ತಿದೆ.

ಈ ಏಜೆನ್ಸಿಗಳಿಂದ ಇಳುವರಿ ಕುರಿತ ಅಂಕಿ ಅಂಶ ದೊರಕಿದ ತಕ್ಷಣ, ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಲ್ಲಿ ಇದನ್ನು ಅಳವಡಿಸಿ ಕೊಂಡು, ತ್ವರಿತವಾಗಿ ರೈತರಿಗೆ ಕ್ಲೇಮ್ ವಿಲೇವಾರಿ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News