ಅರುಣಾಚಲ ಪ್ರದೇಶದ ಶಾಸಕ ಸೇರಿದಂತೆ 7 ಮಂದಿಯ ಗುಂಡಿಟ್ಟು ಹತ್ಯೆ

Update: 2019-05-21 17:28 GMT
ಟಿರೊಂಗ್ ಅಬೋ

ಇಟಾನಗರ,ಮೇ 21: ಅರುಣಾಚಲ ಪ್ರದೇಶದ ತಿರಾಪ್ ಜಿಲ್ಲೆಯಲ್ಲಿ ಮಂಗಳವಾರ ಶಂಕಿತ ಎನ್‌ಎಸ್‌ಸಿನ್(ಐಎಂ) ಉಗ್ರರು ಹಾಲಿ ಶಾಸಕ ತಿರಂಗ್ ಅಬೋಹ್ ಹಾಗೂ ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ ಇತರ ಆರು ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಅಬೋಹ್ ಅವರು ಖೋನ್ಸಾ ಪಶ್ಚಿಮ ಕ್ಷೇತ್ರದಲ್ಲಿ ಎನ್‌ಪಿಪಿ ಅಭ್ಯರ್ಥಿಯಾಗಿ ಪುನರಾಯ್ಕೆ ಬಯಸಿ ಕಣದಲ್ಲಿದ್ದರು.

ಅಬೋಹ್ ಅವರು ಇಬ್ಬರು ಭದ್ರತಾ ಸಿಬ್ಬಂದಿಗಳು ಮತ್ತು ಇತರ ನಾಲ್ವರೊಂದಿಗೆ ಅಸ್ಸಾಮಿನಿಂದ ತನ್ನ ಕ್ಷೇತ್ರಕ್ಕೆ ಮರಳುತ್ತಿದ್ದಾಗ ಬೆಳಿಗ್ಗೆ 11:30ರ ಸುಮಾರಿಗೆ ತಿರಾಪ್ ಜಿಲ್ಲೆಯ ಬೋಗಪಾನಿ ಗ್ರಾಮದ ಸಮೀಪ ಉಗ್ರರು ಅವರ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದು,ಎಲ್ಲ ಏಳೂ ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್.ಥುಂಗನ್ ತಿಳಿಸಿದರು.

ದಾಳಿಯನ್ನು ಖಂಡಿಸಿರುವ ಎನ್‌ಪಿಪಿ ಅಧ್ಯಕ್ಷ ಹಾಗೂ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ.ಸಂಗ್ಮಾ ಅವರು ಈ ದಾಳಿಗೆ ಹೊಣೆಯಾಗಿರುವವರ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಪ್ರಧಾನಿ ಕಚೇರಿ ಮತ್ತು ಕೇಂದ್ರ ಗೃಹಸಚಿವ ರಾಜನಾಥ ಸಿಗ್ ಅವರನ್ನು ಆಗ್ರಹಿಸಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯೊಂದಿಗೆ ರಾಜ್ಯ ವಿಧಾನಸಭಾ ಚುನಾವಣೆಯೂ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News