ಆರೆಸ್ಸೆಸ್ ಪ್ರಚಾರಕ ಸುನಿಲ್ ಜೋಶಿ ಕೊಲೆ ಪ್ರಕರಣಕ್ಕೆ ಮತ್ತೆ ಜೀವ

Update: 2019-05-21 18:24 GMT

ಭೋಪಾಲ,ಮೇ 21: ಭೋಪಾಲ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಜ್ಞಾ ಸಿಂಗ್ ಠಾಕೂರ್‌ಅವರು ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ ಸಿಂಗ್ ವಿರುದ್ಧ ಗೆಲ್ಲಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವ ಬೆನ್ನಲ್ಲೇ ಅವರ ವಿರುದ್ಧದ,12ವರ್ಷಗಳಷ್ಟು ಹಳೆಯ ಕೊಲೆ ಪ್ರಕರಣವನ್ನು ಮತ್ತೆ ತೆರೆಯಲು ಮಧ್ಯಪ್ರದೇಶದ ಕಾಂಗ್ರೆಸ್ ನೇತೃತ್ವದ ಸರಕಾರವು ಯೋಜಿಸುತ್ತಿದೆ.

ಠಾಕೂರ್ ಅವರನ್ನು ಖುಲಾಸೆಗೊಳಿಸಲಾಗಿರುವ ಆರೆಸ್ಸೆಸ್ ಪ್ರಚಾರಕ ಸುನಿಲ್ ಜೋಶಿ ಕೊಲೆ ಪ್ರಕರಣವನ್ನು ಮತ್ತೆ ತೆರೆಯುವ ಕುರಿತು ಕಾನೂನು ಅಭಿಪ್ರಾಯವನ್ನು ಸರಕಾರವು ಕೋರಲಿದೆ ಎಂದು ರಾಜ್ಯದ ಕಾನೂನು ಸಚಿವ ಪಿ.ಸಿ.ಶರ್ಮಾ ಅವರು ಮಂಗಳವಾರ ಇಲ್ಲಿ ತಿಳಿಸಿದರು.2007,ಡಿ.29ರಂದು ದೇವಾಸ್ ಜಿಲ್ಲೆಯಲ್ಲಿ ಜೋಶಿ ಹತ್ಯೆ ನಡೆದಿತ್ತು. 2017ರಲ್ಲಿ ಅಲ್ಲಿಯ ನ್ಯಾಯಾಲಯವು ಸಾಕ್ಷಾಧಾರಗಳ ಕೊರತೆಯಿಂದ ಠಾಕೂರ್ ಮತ್ತು ಇತರ ಏಳು ಆರೋಪಿಗಳನ್ನು ಮುಕ್ತಗೊಳಿಸಿತ್ತು.

ರಾಜ್ಯ ಸರಕಾರವು ಜೋಶಿ ಕೊಲೆ ಪ್ರಕರಣಕ್ಕೆ ಮರುಜೀವ ನೀಡಲು ಮೇಲಿನ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿಯನ್ನು ಸಲ್ಲಿಸುವಂತೆ ದೇವಾಸ್ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ ಶರ್ಮಾ,ಆಗಿನ ಜಿಲ್ಲಾಧಿಕಾರಿಗಳು ಪ್ರಕರಣವನ್ನು ಕಾನೂನು ಅಭಿಪ್ರಾಯಕ್ಕಾಗಿ ಕಾನೂನು ಇಲಾಖೆಗೆ ಕಳುಹಿಸುವ ಬದಲು ಅದನ್ನು ಮುಚ್ಚಲು ಸ್ವಂತ ನಿರ್ಧಾರ ಕೈಗೊಂಡಿದ್ದರು ಎಂದರು.

ಇದು ಸೇಡಿನ ರಾಜಕೀಯವಾಗಿದೆ ಎಂದು ಬಣ್ಣಿಸಿದ ರಾಜ್ಯ ಬಿಜೆಪಿ ವಕ್ತಾರ ರಜನೀಶ್ ಅಗರವಾಲ್ ಅವರು,ಠಾಕೂರ್ ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸಿರುವುದರಿಂದ ಸರಕಾರವು ಈ ನಿರ್ಧಾರವನ್ನು ಕೈಗೊಳ್ಳುತ್ತಿರುವಂತೆ ಕಾಣುತ್ತಿದೆ ಎಂದು ಹೇಳಿದರು.

2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಠಾಕೂರ್ ಹಾಲಿ ಜಾಮೀನಿನಲ್ಲಿ ಹೊರಗಿದ್ದಾರೆ. ಕಾಂಗ್ರೆಸ್ ನಾಯಕರೋರ್ವರ ಹತ್ಯೆ ಪ್ರಕರಣದಲ್ಲಿ ಬಂಧನದಿಂದ ಪಾರಾಗಲು ಪ್ರಯತ್ನಿಸುತ್ತಿದ್ದ ಜೋಶಿ ಯಾನೆ ಗುರೂಜಿಯನ್ನು ದೇವಾಸ್‌ನ ಖಡನ್ ಪ್ರದೇಶದಲ್ಲಿ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಕೊಲೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News