​ಇಂಡಿಯನ್ ಓಪನ್ ಬಾಕ್ಸಿಂಗ್: ಮೇರಿ ಕೋಮ್ ಸೆಮೀಸ್‌ಗೆ

Update: 2019-05-22 04:40 GMT

ಗುವಾಹತಿ: ಆರು ಬಾರಿಯ ವಿಶ್ವಚಾಂಪಿಯನ್ ಮೇರಿ ಕೋಮ್, ಭಾರತೀಯ ಮುಕ್ತ ಬಾಕ್ಸಿಂಗ್ ಟೂರ್ನಿಯಲ್ಲಿ ನೇಪಾಳದ ಮಾಲಾ ರಾಯ್ ಅವರನ್ನು ಸುಲಭವಾಗಿ ಸೋಲಿಸಿ ಸೆಮಿಫೈನಲ್ ತಲುಪಿದ್ದಾರೆ.

51 ಕೆಜಿ ವಿಭಾಗದಲ್ಲಿ ಯಶಸ್ವಿ ಪುನರಾಗಮವನ್ನು ಸಾರಿದ ಮೇರಿಕೋಮ್ ಟೂರ್ನಿಯಲ್ಲಿ ಪದಕ ಖಚಿತಪಡಿಸಿಕೊಂಡಿದ್ದಾರೆ. ಅತಿಥೇಯರು ಬಹುತೇಕ ಬೌಟ್‌ಗಳಲ್ಲಿ ಮೇಲುಗೈ ಸಾಧಿಸಿದ್ದಾರೆ.

ಕರ್ಮವೀರ ನವೀನ್‌ ಚಂದ್ರ ಬೊರ್ಡೋಲಿ ಒಳಾಂಗಣ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಪ್ರಚಂಡ ಕರತಾಡನದೊಂದಿಗೆ ರಿಂಗ್‌ಗೆ ಆಗಮಿಸಿದ ಲಂಡನ್ ಒಲಿಂಪಿಕ್ ಪದಕ ವಿಜೇತೆ, ಕ್ಷಣಾರ್ಧದಲ್ಲಿ ದಾಖಲೆ 5-0 ಅಂಕಗಳ ಗೆಲುವು ಸಾಧಿಸಿದರು.

ಅದ್ಭುತ ಕೈಚಳಕ ತೋರಿದ ಮೇರಿ ಕೋಮ್ ಅವರ ಎದುರಾಳಿ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸದೇ, ತುಂಬು ನಗೆಯೊಂದಿಗೆ, ರೋಮಾಂಚನದಿಂದ ಭಾರತದ ಮಹಿಳಾ ಬಾಕ್ಸಿಂಗ್‌ನ ದಿಗ್ಗಜೆಯನ್ನು ಆಲಂಗಿಸಿಕೊಂಡರು.

"ಇದು ನನಗೆ ಕಲಿಕೆಯ ಅನುಭವ ನೀಡಿತು. ನೇಪಾಳದ ಎದುರಾಳಿ ಅನುಭವಿ ಹಾಗೂ ಪ್ರಬಲ ಸ್ಪರ್ಧಿಯಾಗಿದ್ದರು. ಭಾರತದ ಮಹಿಳಾ ಕುಸ್ತಿಗೆ ಮರಳಿರುವ ಬಗ್ಗೆ ಅತೀವ ಸಂತಸವಿದೆ. ದೇಶ ಹೆಮ್ಮೆಪಡುವಂತೆ ಮಾಡಲು ಎಲ್ಲರೂ ಶಕ್ತಿಮೀರಿ ಶ್ರಮಿಸುತ್ತೇವೆ" ಎಂದು ಕೋಮ್ ಪ್ರತಿಕ್ರಿಯಿಸಿದರು.

ವಿಶ್ವಚಾಂಪಿಯನ್‌ಶಿಪ್‌ಗೆ ಸಜ್ಜಾಗುವ ನಿಟ್ಟಿನಲ್ಲಿ ಈ ಮಣಿಪುರಿ ಬಾಕ್ಸರ್, ಏಷ್ಯನ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದರು.
ಮಾಜಿ ವಿಶ್ವಚಾಂಪಿಯನ್ ಸರಿತಾ ದೇವಿ ಕೂಡಾ 60 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿ ಪದಕ ಖಾತರಿಪಡಿಸಿಕೊಂಡರು. ಮತ್ತೊಂದು ಪಂದ್ಯದಲ್ಲಿ ಸ್ಥಳೀಯ ಬಾಕ್ಸರ್ ಅಂಕುಶಿತಾ ಬೋರೊ ಲಲಿತಾ ಅವರನ್ನು 4-1 ಅಂಕಗಳಿಂದ ಸೋಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News