ರಾಜೀವ್ ಚಂದ್ರಶೇಖರ್ ಚುನಾವಣಾ ಅಫಿಡವಿಟ್ ತನಿಖೆಗೊಳಪಡಿಸುವಂತೆ ಹೈಕೋರ್ಟಿನಲ್ಲಿ ಪಿಐಎಲ್

Update: 2019-05-22 09:36 GMT
ರಾಜೀವ್ ಚಂದ್ರಶೇಖರ್ 

ಹೊಸದಿಲ್ಲಿ : ರಾಜ್ಯಸಭಾ ಸಂಸದ ಹಾಗೂ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರು  ತಮ್ಮ ಒಡೆತನದ ಆಸ್ತಿ ಕುರಿತಂತೆ ರಾಜ್ಯಸಭೆಗೆ ಮಾರ್ಚ್ 2018ರಲ್ಲಿ ಸ್ಪರ್ಧಿಸಿದ್ದ ಸಂದರ್ಭ  ಸಲ್ಲಿಸಿದ ಚುನಾವಣಾ ಅಫಿದಾವತ್ತಿನಲ್ಲಿ ಸಂಪೂರ್ಣ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ದಿಲ್ಲಿ ಹೈಕೋರ್ಟಿನಲ್ಲಿ ಬೆಂಗಳೂರಿನ ಟೆಕ್ಕಿ ರಂಜಿತ್ ಥಾಮಸ್ ಎಂಬವರು  ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಿದ್ದಾರೆ.

ರಾಜೀವ್ ಚಂದ್ರಶೇಖರ್ ಅವರು ನೋಂದಣಿ ಸಂಖ್ಯೆ ಡಿಎಲ್ 6ಸಿಝೆಡ್0100 ಹೊಂದಿರುವ ಲ್ಯಾಂಡ್ ರೋವರ್ ವಾಹನವನ್ನು ತಮ್ಮ ಹೆಸರಿನಲ್ಲಿ ಹೊಂದಿರುವುದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ದಾಖಲೆಗಳಲ್ಲಿದ್ದರೂ ಅದನ್ನು ಅವರು ತಮ್ಮ ಅಫಿದಾವತ್ತಿನಲ್ಲಿ ನಮೂದಿಸಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅವರ ಪತ್ನಿ ವೆಕ್ಟ್ರಾ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರೈ ಲಿ ಇದರಲ್ಲಿ ಹೊಂದಿರುವ ಶೇರುಗಳ ಬಗ್ಗೆಯೂ ಅಫಿದಾವತ್ತಿನಲ್ಲಿ ನಮೂದಿಸಲಾಗಿಲ್ಲ. ರಾಜೀವ್ ಚಂದ್ರಶೇಖರ್  ಅವರು ಒಟ್ಟು 6,34,360 ಶೇರುಗಳನ್ನು ಹೊಂದಿರುವ ಈ ಕಂಪೆನಿಯ 6,34,160 ಶೇರುಗಳನ್ನು ಹೊಂದಿದ್ದರೆ 100 ಶೇರುಗಳು ಅವರ ಪತ್ನಿ ಅಂಜು ಅವರ ಹೆಸರಿನಲ್ಲಿ ಹಾಗೂ ಇನ್ನೊಂದು ನೂರು ಶೇರುಗಳು ವಳ್ಳಿ ಚಂದ್ರಶೇಖರ್ ಅವರ ಹೆಸರಿನಲ್ಲಿದೆ ಎಂದು ಪಿಐಎಲ್ ಹೇಳಿದೆ. ಬೆಂಗಳೂರಿನ ಕೊರಮಂಗಲ 3ನೇ ಬ್ಲಾಕಿನಲ್ಲಿ ರಾಜೀವ್ ಆವರು ಹೊಂದಿರುವ ಎರಡು ಆಸ್ತಿಗಳ ಬಗ್ಗೆಯೂ ಮಾಹಿತಿ ನೀಡಲಾಗಿಲ್ಲ ಎಂದು ದೂರಲಾಗಿದೆ.

ಈ ಪ್ರಕರಣವನ್ನು ಚುನಾವಣಾ  ಆಯೋಗವು ಸಂವಿಧಾನ ತನಗೆ  324ನೇ ವಿಧಿಯನ್ವಯ ಕೊಟ್ಟಿರುವ ಅಧಿಕಾರಗಳನ್ನು ಬಳಸಿ ತನಿಖೆ ಗೊಳಪಡಿಸಬೇಕೆಂದು ಪಿಐಎಲ್ ನಲ್ಲಿ  ಮನವಿ  ಮಾಡಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ಮೇ 27ರಂದು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News