ವಿವಿಪ್ಯಾಟ್ ಮತ ಎಣಿಕೆ ಮೊದಲು ನಡೆಸಿ ಎಂಬ ವಿಪಕ್ಷಗಳ ಮನವಿ ತಿರಸ್ಕರಿಸಿದ ಚು. ಆಯೋಗ

Update: 2019-05-22 11:24 GMT

ಹೊಸದಿಲ್ಲಿ, ಮೇ 22: ಇವಿಎಂ ಮತ ಎಣಿಕೆ ನಡೆಸುವ ಮೊದಲು ವಿವಿಪ್ಯಾಟ್ ಸ್ಲಿಪ್ ಗಳನ್ನು ಎಣಿಸಬೇಕೆಂದು ವಿಪಕ್ಷಗಳು ಮುಂದಿಟ್ಟಿರುವ ಬೇಡಿಕೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ಸುಪ್ರೀಂ ಕೋರ್ಟ್ ತೀರ್ಪಿನಂತೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐದು ಮತದಾನ ಕೇಂದ್ರಗಳ ವಿವಿಪ್ಯಾಟ್ ಯಂತ್ರಗಳ ಸ್ಲಿಪ್ ಗಳನ್ನು ಇವಿಎಂ ಮತಗಳೊಂದಿಗೆ ಎಲ್ಲಾ ಮತಗಳ ಎಣಿಕೆ ಮುಗಿದ ನಂತರ ನಡೆಸಲಾಗುವುದು, ಮತ ಎಣಿಕೆಯ ಮೊದಲು ನಡೆಸಲಾಗದು ಎಂದು ಚುನಾವಣಾ ಆಯೋಗ ಬುಧವಾರ ಸ್ಪಷ್ಟ ಪಡಿಸಿದೆ.

ಮಂಗಳವಾರ 22 ವಿಪಕ್ಷಗಳ ಪ್ರತಿನಿಧಿಗಳನ್ನೊಳಗೊಂಡ ನಿಯೋಗ ಚುನಾವಣಾ ಆಯೋಗವನ್ನು ಭೇಟಿಯಾಗಿ ತನ್ನ ಆಗ್ರಹವನ್ನು ಮುಂದಿಟ್ಟಿತ್ತಲ್ಲದೆ ವಿವಿಪ್ಯಾಟ್ ಸ್ಲಿಪ್ ಹಾಗೂ ಇವಿಎಂ ಮತ ಎಣಿಕೆಯಲ್ಲಿ ವ್ಯತ್ಯಾಸವಿದ್ದರೆ, ಆ ನಿರ್ದಿಷ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಳನ್ನು ವಿವಿಪ್ಯಾಟ್ ಸ್ಲಿಪ್ ಗಳೊಂದಿಗೆ ತಾಳೆ  ಮಾಡಬೇಕೆಂದು ಆಗ್ರಹಿಸಿದ್ದವು.

ಈ ಬೇಡಿಕೆ ಪರಿಶೀಲಿಸಲು ಆಯೋಗ ಸಮಯಾವಕಾಶ ಕೋರಿತ್ತು. ಇಂದು ಆಯೋಗದ ಎಲ್ಲಾ ಆಯುಕ್ತರು ಸಭೆ ಸೇರಿ ವಿಪಕ್ಷಗಳ ಆಗ್ರಹವನ್ನು ತಿರಸ್ಕರಿಸಿದ್ದಾರೆ.

ಮತ ಎಣಿಕೆಯ ಅಂತ್ಯದ ವೇಳೆ ವಿವಿಪ್ಯಾಟ್ ಸ್ಲಿಪ್ ಎಣಿಕೆ ಹಾಗೂ ಇವಿಎಂ ಮತಗಳ ನಡುವೆ ವ್ಯತ್ಯಾಸವಿದ್ದಿದ್ದೇ ಆದಲ್ಲಿ ವಿವಿಪ್ಯಾಟ್ ಮತಗಳನ್ನೇ ಅಂತಿಮಗೊಳಿಸಿ ಫಲಿತಾಂಶವನ್ನು ತಿದ್ದುಪಡಿಗೊಳಿಸಿ ಪ್ರಕಟಿಸಲಾಗುವುದು ಎಂದು ಆಯೋಗ ಹೇಳಿದೆ.

ಹಲವು  ಕಡೆಗಳಲ್ಲಿ ಇವಿಎಂಗಳ ಶಂಕಾಸ್ಪದ ಸಾಗಾಟದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ನಂತರ ಉಂಟಾದ ಆತಂಕದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಆಯೋಗ ಅವುಗಳೆಲ್ಲವೂ ಬಳಕೆಯಾಗದ ಇವಿಎಂಗಳೆಂದು ಸಮಜಾಯಿಷಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News