ಆಂಧ್ರ: ಜಗನ್ಮೋಹನ ರೆಡ್ಡಿ 30ಕ್ಕೆ ಪ್ರಮಾಣವಚನ

Update: 2019-05-24 03:58 GMT

ಆಂಧ್ರ ಪ್ರದೇಶ, ಮೇ 24: ಆಂಧ್ರದ ನೂತನ ಮುಖ್ಯಮಂತ್ರಿಯಾಗಿ ವೈಎಸ್‌ಆರ್‌ಸಿ ಪಕ್ಷದ ಮುಖಂಡ ಜಗನ್ಮೋಹನ ರೆಡ್ಡಿ ಮೇ 30ರಂದು ತಿರುಪತಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ಈಗಾಗಲೇ 150 ಸ್ಥಾನಗಳನ್ನು ಗೆದ್ದಿರುವ ವೈಎಸ್‌ಆರ್ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಶನಿವಾರ ವೈಎಸ್‌ಆರ್‌ಸಿ ಶಾಸಕಾಂಗ ಪಕ್ಷದ ಸಭೆ ಸೇರಲಿದ್ದು, ರೆಡ್ಡಿಯವರನ್ನು ಅಧಿಕೃತವಾಗಿ ನಾಯಕನನ್ನಾಗಿ ಚುನಾಯಿಸಲಿದೆ.

ರಾಯಲಸೀಮೆ ಪ್ರದೇಶದಲ್ಲಿ ತೆಲುಗುದೇಶಂ ಎಲ್ಲ ಎಂಟು ಲೋಕಸಭಾ ಕ್ಷೇತ್ರಗಳಲ್ಲೂ ಸೋಲು ಅನುಭವಿಸಿದ್ದು, 52 ವಿಧಾನಸಭಾ ಕ್ಷೇತ್ರಗಳ ಪೈಕಿ 50ನ್ನು ಸೋತಿದೆ.

ತಂದೆಯ ನಿಧನದ ಬಳಿಕ 2009ರ ಸೆಪ್ಟೆಂಬರ್‌ನಲ್ಲೇ ಸಿಎಂ ಗಾದಿ ಮೇಲೆ ಕಣ್ಣಿಟ್ಟಿದ್ದ ಜಗನ್‌ಗೆ ಹತ್ತು ವರ್ಷಗಳ ಸುದೀರ್ಘ ಕಾಯುವಿಕೆಗೆ ಕೊನೆಗೂ ಫಲ ಸಿಕ್ಕಿದೆ.

ಪುಲಿವೆಂದುಲಾ ಕ್ಷೇತ್ರದಿಂದ ಜಗನ್ಮೋಹನ ರೆಡ್ಡಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಸತೀಶ್ ರೆಡ್ಡಿಯವರನ್ನು 90,543 ಮತಗಳ ಅಂತರದಿಂದ ಸೋಲಿಸಿದ್ದಾರೆ. ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು, ವೈಎಸ್‌ಆರ್ ಕಾಂಗ್ರೆಸ್‌ನ ಕೆ.ಚಂದ್ರಮೌಳಿಯವರನ್ನು 29,993 ಮತಗಳ ಅಂತರದಿಂದ ಕುಪ್ಪಂ ಕ್ಷೇತ್ರದಲ್ಲಿ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News