ಜಂಗೀಪುರ: ಠೇವಣಿ ಕಳೆದುಕೊಂಡ ವೆಲ್ಫೇರ್ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಎಸ್.ಕ್ಯು. ಆರ್. ಇಲ್ಯಾಸ್

Update: 2019-05-24 10:30 GMT

ಪಶ್ಚಿಮ ಬಂಗಾಳದ ಜಂಗೀಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಸ್ ಕ್ಯು ಆರ್ ಇಲ್ಯಾಸ್ ಅವರು ಐದನೇ ಸ್ಥಾನ ಪಡೆದಿದ್ದು, ಠೇವಣಿ ಕಳೆದುಕೊಂಡಿದ್ದಾರೆ. ಈ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ನ ಖಲೀಲುರ್ರಹ್ಮಾನ್ ಐದೂವರೆ ಲಕ್ಷಕ್ಕಿಂತ ಅಧಿಕ ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ.

ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೆಹಫೂಝ ಖಾತೂನ್ 3,17, 056 ಮತಗಳನ್ನು ಪಡೆದು ಗಮನ ಸೆಳೆದಿದ್ದರೆ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪುತ್ರ ಅಭಿಜಿತ್ ಮುಖರ್ಜಿ 2,55,836 ಮತಗಳನ್ನು ಮಾತ್ರ ಪಡೆದು ಮೂರನೇ ಸ್ನಾನಕ್ಕಿಳಿದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ್ದ ಸಿಪಿಎಂ ಅಭ್ಯರ್ಥಿ ಕೇವಲ 95,450 ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.  

ಎಸ್ ಕ್ಯು ಆರ್ ಇಲ್ಯಾಸ್ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಚುನಾವಣೆಗೆ ಬಹಳ ಮೊದಲೇ ಘೋಷಿಸಲಾಗಿತ್ತು ಮತ್ತು ಅವರ ಪರವಾಗಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೂಡ ನಡೆದಿತ್ತು. ಇಲ್ಯಾಸ್ ಅವರ ಪುತ್ರ ಜೆ ಎನ್ ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರೂ ತಂದೆಯ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಆದರೆ ಇಲ್ಯಾಸ್  ಕೇವಲ 21,302 (1.63 %) ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಅವರು ಠೇವಣಿ ಕಳೆದುಕೊಂಡಿದ್ದಾರೆ.  ಚಲಾವಣೆಯಾದ ಮತಗಳ ಪೈಕಿ  16.6 % ಕ್ಕಿಂತ ಕಡಿಮೆ ಮತ ಪಡೆದರೆ ಅಂತಹ ಅಭ್ಯರ್ಥಿಯ ಠೇವಣಿ ವಾಪಸ್ ಮಾಡಲಾಗುವುದಿಲ್ಲ. ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ  ಎಸ್ ಡಿ ಪಿ ಐ ಅಭ್ಯರ್ಥಿ  ಕೂಡ 11, 696  (0. 9% ) ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News