ಮೇ 31ರ ಒಳಗೆ ಮೋದಿಯಿಂದ ನೂತನ ಶಿಕ್ಷಣ ನೀತಿ ಘೋಷಣೆ

Update: 2019-05-24 18:07 GMT

ಹೊಸದಿಲ್ಲಿ, ಮೇ 24: ಮುಂದಿನ ಮೋದಿ ನೇತೃತ್ವದ ಸರಕಾರ ತನ್ನ ನೂತನ ಶಿಕ್ಷಣ ನೀತಿ (ಎನ್‌ಇಪಿ) ಯನ್ನು ಮೇ ಅಂತ್ಯದ ಒಳಗೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಇದರೊಂದಿಗೆ ಎನ್‌ಇಪಿಗಾಗಿ ಕಾಯುವಿಕೆ ಅಂತ್ಯಗೊಳ್ಳಲಿದೆ.

 ತನ್ನ ಮೊದಲ ನೂರು ದಿನಗಳ ಅಧಿಕಾರದ ಅವಧಿಯಲ್ಲಿ ಯೋಜಿಸಲಾದ ಪ್ರಮುಖ ನಿರ್ಧಾರಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನೂತನ ಶಿಕ್ಷಣ ನೀತಿ ತರುವುದು ಕೂಡ ಒಂದು. ಫಲಿತಾಂಶ ಘೋಷಣೆಯಾಗುವುದಕ್ಕಿಂತ ಮುನ್ನವೇ, ನೂತನ ಸರಕಾರದ ಮೊದಲ 100 ದಿನಗಳ ಒಳಗೆ ಏನು ಮಾಡಬಹುದು ಎಂಬ ನಕ್ಷೆಯನ್ನು ಸಿದ್ದಗೊಳಿಸುವಂತೆ ಎಲ್ಲ ಸಚಿವರಿಗೆ ಸೂಚಿಸಲಾಗಿತ್ತು. ಬೆಳವಣಿಗೆಯನ್ನು ದೃಢಪಡಿಸಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಗಳು, ನೂತನ ಶಿಕ್ಷಣ ನೀತಿ ಮೊದಲು ನೂತನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ ಹಸ್ತಾಂತರಿಸಲಾಗುವುದು.

 ಅನಂತರ ಮೇ 31ರ ಒಳಗೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದಿದ್ದಾರೆ. ಸಾರ್ವಜನಿಕ ಪ್ರತಿಕ್ರಿಯೆಯ ಬಳಿಕ ನೀತಿಯನ್ನು ಅಂತಿಮವಾಗಿ ಅಂಗೀಕಾರಕ್ಕಾಗಿ ಜುಲೈಯಲ್ಲಿ ಸಂಪುಟದಲ್ಲಿ ಮಂಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News