ಅಮೆರಿಕದ ಸೇನಾ ಉಪಸ್ಥಿತಿಯ ಹೆಚ್ಚಳದಿಂದ ಅಂತಾರಾಷ್ಟ್ರೀಯ ಶಾಂತಿಗೆ ಬೆದರಿಕೆ: ಇರಾನ್

Update: 2019-05-25 18:20 GMT

ಟೆಹರಾನ್,ಮೇ 25: ಮಧ್ಯಪ್ರಾಚ್ಯದಲ್ಲಿ 1500 ಹೆಚ್ಚುವರಿ ಪಡೆಗಳನ್ನು ನಿಯೋಜಿಸುವ ಅಮೆರಿಕದ ನಿರ್ಧಾರವು ಅಂತಾರಾಷ್ಟ್ರೀಯ ಶಾಂತಿಗೆ ಬೆದರಿಕೆಯಾಗಿದೆಯೆಂದು ಇರಾನ್‌ನ ವಿದೇಶಾಂಗ ಸಚಿವ ಮುಹಮ್ಮದ್ ಜಾವಿದ್ ಝರೀಫ್ ಹೇಳಿರುವುದಾಗಿ ಇರಾನ್‌ನ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

    ‘‘ನಮ್ಮ ಪ್ರಾಂತದಲ್ಲಿ ಅಮೆರಿಕದ ಸೇನಾ ಉಪಸ್ಥಿತಿ ಹೆಚ್ಚಿರುವುದು ಅತ್ಯಂತ ಅಪಾಯಕಾರಿಯಾಗಿದೆ ಹಾಗೂ ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಗೆ ಬೆದರಿಕೆಯಾಗಿದೆ ಮತ್ತು ಅದನ್ನು ನಾವು ಎದುರಿಸಬೇಕಾಗಿದೆ’’ ಎಂದು ಝರೀಫ್ ಹೇಳಿದ್ದಾರೆ. ಅವರು ಶನಿವಾರ ಪಾಕ್ ಪ್ರವಾಸಕ್ಕೆ ನಿರ್ಗಮಿಸುವ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಆತಂಕವನ್ನು ವ್ಯಕ್ತಪಡಿಸಿದರು.

   ಅಮೆರಿಕವು ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸುವ ಮುನ್ನ, ಈ ತಿಂಗಳ ಆರಂಭದಲ್ಲಿ ಗಲ್ಫ್ ಪ್ರಾಂತದಲ್ಲಿ ಏರ್‌ಕ್ರಾಫ್ಟ್ ಕ್ಯಾರಿಯರ್ ಟಾಸ್ಕ್‌ಫೋರ್ಸ್, ಅಂಫಿಬಿಯಸ್ ಅಸಾಲ್ಟ್ ನೌಕೆ ಹಾಗೂ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ನಿಯೋಜನೆಗೊಳಿಸಿತ್ತು. ಗಲ್ಫ್ ಸಾಗರಪ್ರದೇಶದಲ್ಲಿ ಇರಾನ್‌ನ ಉನ್ನತ ನಾಯಕತ್ವದ ಅನುಮೋದನೆಯೊಂದಿಗೆ ನಡೆದ ದಾಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಂಡಿರುವುದಾಗಿ ಅದು ತಿಳಿಸಿದೆ.

 ಟ್ರಂಪ್ ಆಡಳಿತದಿಂದ ಮಧ್ಯಪ್ರಾಚ್ಯಕ್ಕೆ 1500 ಹೆಚ್ಚುವರಿ ಸೈನಿಕರ ರವಾನೆ ಹಾಗೂ ಸೌದಿ ಅರೇಬಿಯಕ್ಕೆ ಶತಕೋಟ್ಯಂತರ ಡಾಲರ್ ವೌಲ್ಯದ ಶಸ್ತ್ರಾಸ್ತ್ರಗಳ ಮಾರಾಟದ ನಿರ್ಧಾರವು ಅಮೆರಿಕ ಹಾಗೂ ಇರಾನ್ ನಡುವೆ ಉದ್ವಿಗ್ನತೆ ಉಲ್ಬಣಿಸುವುಕ್ಕೆ ಕಾರಣವಾಗಿದೆ.

 ಇರಾನ್ ಅಣುಶಕ್ತಿ ಯೋಜನೆಗೆ ಸಂಬಂಧಿಸಿ 2015ರಲ್ಲಿ ಏರ್ಪಟ್ಟ ಒಪ್ಪಂದದಿಂದ ಕಳೆದ ವರ್ಷ ಹಿಂದೆ ಸರಿದ ಬಳಿಕ ಅಮೆರಿಕವು ಕಳೆದ ತಿಂಗಳು ಟೆಹರಾನ್ ವಿರುದ್ಧ ಏಕಪಕ್ಷೀಯವಾಗಿ ನಿರ್ಬಂಧಗಳನ್ನು ಕಳೆದ ಮೇ ತಿಂಗಳಲ್ಲಿ ಮತ್ತೆ ವಿಧಿಸಿತ್ತು. ಈ ನಿರ್ಬಂಧಗಳು ಈ ತಿಂಗಳಿಂದ ಸಂಪೂರ್ಣವಾಗಿ ಜಾರಿಗೆ ಬರಲಿವೆ.

   ಈಗಾಗಲೇ ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿರುವ ಇರಾನ್‌ಗೆ ಅಮೆರಿಕದ ಈ ನಡೆಯು ಭಾರೀ ಹೊಡೆತವನ್ನು ನೀಡಿದೆ. ಇರಾನ್ ವಿರುದ್ಧ ಅಮೆರಿಕ ನಿರ್ಬಂಧಿಸಿರುವ ಆರ್ಥಿಕ ನಿರ್ಬಂಧಗಳನ್ನು ಪ್ರಬಲವಾಗಿ ವಿರೋಧಿಸಿದ ರಾಷ್ಟ್ರವಾದ ಟರ್ಕಿ ಕೂಡಾ ವಾಶಿಂಗ್ಟನ್‌ನ ಒತ್ತಡದ ಪರಿಣಾಮವಾಗಿ ಆ ದೇಶದಿಂದ ತೈಲ ಖರೀದಿಯನ್ನು ಸ್ಥಗಿತಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News