ಡಾಟರ್ ಆಫ್ ಪಾರ್ವತಮ್ಮ: ಮ್ಯಾಟರ್ ಆಫ್ ಮರ್ಡರ್ ಮಿಸ್ಟರಿ!

Update: 2019-05-25 18:31 GMT

ಚಿತ್ರದ ಹೆಸರು ಕೂಡ ಹೇಗೆ ನಿರೀಕ್ಷೆಗೆ ಕಾರಣವಾಗುತ್ತದೆ ಎನ್ನುವುದಕ್ಕೆ ‘ಡಾಟರ್ ಆಫ್ ಪಾರ್ವತಮ್ಮ’ ಎನ್ನುವ ಶೀರ್ಷಿಕೆ ಸಾಕ್ಷಿ. ಆದರೆ ಶೀರ್ಷಿಕೆ ಪಾತ್ರದಲ್ಲಿ ನಟಿಸಿರುವ ಸದ್ಯದ ಸೆನ್ಸೇಶನಲ್ ನಟಿಗೆ ಯಾವುದೇ ಪ್ರಾಮುಖ್ಯತೆ ಇರದಂಥ ಪಾತ್ರ ನೀಡುವ ಮೂಲಕ ಕಾತರದ ಕಾಯುವಿಕೆಗೆ ತಣ್ಣೀರೆರಚಿದ್ದಾರೆ ನಿರ್ದೇಶಕರು.

ಸಿಐಡಿ ಆಫೀಸರ್ ವೈದೇಹಿ ನಿಗೂಢ ಸಾವಿನ ಪ್ರಕರಣವೊಂದನ್ನು ಕೈಗೆತ್ತಿಕೊಳ್ಳುವ ಚಿತ್ರದ ಆರಂಭದಲ್ಲಿ ಹೇಳುವುದೆಲ್ಲ ಆಕೆಯ ಫ್ಲ್ಯಾಷ್ ಬ್ಯಾಕ್ ಲವ್ ಸ್ಟೋರಿಯ ಬಗ್ಗೆ ಮಾತ್ರ. ಅದರಲ್ಲಿ ಕಾಲೇಜ್ ದಿನಗಳಿಂದಲೇ ಗಂಡುಬೀರಿಯಂತೆ ವರ್ತಿಸುವ ವೈದೇಹಿ ನಾನು ಯಾರು ಗೊತ್ತಾ? ಪಾರ್ವತಮ್ಮನ ಮಗಳು ಎಂದು ಹೇಳಿಕೊಳ್ಳುತ್ತಾಳಾದರೂ, ಆ ಪಾರ್ವತಮ್ಮ ಯಾವುದೇ ಬಿಲ್ಡಪ್‌ಗಳಿಲ್ಲದ ಸಾಧಾರಣ ತಾಯಿಯಷ್ಟೇ ಆಗಿರುತ್ತಾಳೆ ಎನ್ನುವುದು ವಾಸ್ತವ. ಬೆಂಗಳೂರಿನ ರಿಂಗ್ ರೋಡ್ ನಲ್ಲಿ ಪತ್ತೆಯಾದ ಡಾಕ್ಟರ್ ಅಹಲ್ಯಾಳ ಮೃತದೇಹದ ಕುರಿತಾದ ತನಿಖೆಯಲ್ಲಿ ಅದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದನ್ನು ಪತ್ತೆ ಹಚ್ಚುವುದೇ ಚಿತ್ರದ ದ್ವಿತೀಯಾರ್ಧ. ನಿರೀಕ್ಷೆಯಂತೆ ವೈದೇಹಿ ಪ್ರಕರಣವನ್ನು ಬಗೆಹರಿಸಿ ಅಪರಾಧಿಯನ್ನು ಪತ್ತೆಹಚ್ಚುವುದರೊಂದಿಗೆ ಚಿತ್ರ ಕೊನೆಗೊಳ್ಳುತ್ತದೆ.

 ಎರಡು ಜಮಾನದ ಕನ್ನಡದ ಇಬ್ಬರು ಖ್ಯಾತ ತಾರೆಯರು ಇರುವ ಚಿತ್ರ. ಸಾಲದೆಂಬಂತೆ ಕನ್ನಡ ಚಿತ್ರೋದ್ಯಮದಲ್ಲಿ ಹೆಸರಾಗಿರುವ ಪಾರ್ವತಮ್ಮ ಎನ್ನುವ ಒಂದು ಪ್ರಬಲ ಹೆಸರನ್ನು ಬಳಸಿಕೊಂಡು ನಾಯಕಿ ಆಕೆಯ ಮಗಳು ಎನ್ನುವ ಬಿಲ್ಡಪ್ ಬೇರೆ. ಆದರೆ ಚಿತ್ರ ಮಾತ್ರ ತಾಯಿಯ ಕತೆಯೂ ಅಲ್ಲ, ತಾಯಿ ಮಗಳ ಕತೆಯೂ ಅಲ್ಲ ಎಂಬಲ್ಲಿಗೆ ಪ್ರೇಕ್ಷಕರ ಭಾವನೆಗೆ ಮೊದಲ ಏಟು ಬಿದ್ದಿರುತ್ತದೆ. ಫ್ಲ್ಯಾಶ್ ಬ್ಯಾಕ್ ಮೂಲಕ ನಾಯಕಿಯ ಕಾಲೇಜ್ ದಿನಗಳ ಬಗ್ಗೆ ಹೇಳುವ ನಿರ್ದೇಶಕ ಅದರಲ್ಲಿ ಆಕೆಯ ಗಂಡುಬೀರಿತನದ ಹೊರತು ಹೇಳುವ ಸಂಗತಿಗಳೇನಿಲ್ಲ. ಅದೇ ವೇಳೆ ತಾಯಿ ಪಾತ್ರಕ್ಕೊಂದು ಭದ್ರವಾದ ತಳಹದಿಯನ್ನು ಫ್ಲ್ಯಾಶ್ ಬ್ಯಾಕ್ ಮೂಲಕ ನೀಡುತ್ತಾರೇನೋ ಎನ್ನುವ ನಿರೀಕ್ಷೆಯನ್ನು ಕೂಡ ಸುಳ್ಳು ಮಾಡುತ್ತಾರೆ. ಮಗಳನ್ನು ಸದಾ ಮದುವೆಗೆ ಒತ್ತಾಯಿಸುವ ಸರಾಸರಿ ತಾಯಿಯ ಪಾತ್ರದಲ್ಲಿ ಬಂದು ಹೋಗಿದ್ದಾರೆ ಸುಮಲತಾ ಅಂಬರೀಷ್. ಕೌಟುಂಬಿಕ ಚಿತ್ರ ನೋಡಲು ಬರುವ ಪ್ರೇಕ್ಷಕರಿಗೆ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ನೀಡಿದ್ದಾರೆ ನವ ನಿರ್ದೇಶಕ ಶಂಕರ್. ಸಾವಿನ ತನಿಖೆಗೆ ಸಂಬಂಧಿಸಿದ ಕತೆಯಾದ ಕಾರಣ ಸಾಮಾನ್ಯ ಪ್ರೇಕ್ಷಕರನ್ನು ಆಸಕ್ತಿಯಿಂದ ನೋಡುವಂತೆ ಮಾಡುವಲ್ಲಿ ಚಿತ್ರ ಗೆಲ್ಲುತ್ತದೆ. ಅದೇ ವೇಳೆ ಸಿಐಡಿ ಅಧಿಕಾರಿಯಾಗಿ ನಾಯಕಿ ಹರಿಪ್ರಿಯಾ ಅದೇನೋ ವಿಶೇಷ ಸಾಧನೆ ಮಾಡುತ್ತಾರೆ, ಹೊಡೆದಾಡುತ್ತಾರೆ ಎಂದೆಲ್ಲ ನಿರೀಕ್ಷಿಸುವ ಹಾಗಿಲ್ಲ! ಯಾವುದೇ ಹೊಸ ನಾಯಕರನ್ನು ಇಟ್ಟು ಮಾಡಬಹುದಾದ ಈ ಕತೆಗೆ ಯಾಕೆ ನಿರ್ದೇಶಕರು ಇಬ್ಬರು ನಾಯಕಿಯರನ್ನು ಆಯ್ಕೆ ಮಾಡಿಕೊಂಡರು ಎನ್ನುವುದು ಅರ್ಥವಾಗುವುದಿಲ್ಲ.

ಚಿತ್ರದಲ್ಲಿ ವೈದೇಹಿಯ ಫ್ಲ್ಯಾಷ್ ಬ್ಯಾಕ್‌ನಲ್ಲಿ ಬರುವ ಬಾಯ್ ಫ್ರೆಂಡ್ ಅನಂತು ಪಾತ್ರದಲ್ಲಿ ಸೂರಜ್ ಗೌಡ ನಟಿಸಿದ್ದಾರೆ. ದ್ವಿತೀಯಾರ್ಧದಲ್ಲಿ ಹರಿಪ್ರಿಯಾ ಮೆಚ್ಚುವ ಹುಡುಗನಾಗಿ ಮತ್ತೋರ್ವ ಯುವ ನಟ ಪ್ರಭು ನಟಿಸಿದ್ದಾರೆ. ಚಿತ್ರದಲ್ಲಿ ಹಾಸ್ಯಕ್ಕೆ ಅಷ್ಟೊಂದು ಅವಕಾಶಗಳು ಇಲ್ಲವಾದರೂ ತರಂಗ ವಿಶ್ವ ತಮ್ಮಿಂದಾಗುವಷ್ಟು ನಗಿಸುವ ಪ್ರಯತ್ನ ನಡೆಸಿದ್ದಾರೆ. ದೃಶ್ಯಕ್ಕೆ ತಕ್ಕಂತೆ ಸಂಭಾಷಣೆ ಒದಗಿಸುವಲ್ಲಿ, ಹೆಚ್ಚಿನ ದೃಶ್ಯಗಳಿಗೆ ಸರಿಯಾದ ಅಂತ್ಯ ನೀಡುವಲ್ಲಿ ನಿರ್ದೇಶಕರು ಸೋತಿದ್ದಾರೆ. ಥ್ರಿಲ್ಲರ್ ಚಿತ್ರದಲ್ಲಿನ ಟಾಮ್ ಬಾಯ್ ಪಾತ್ರವಾದರೂ ಹರಿಪ್ರಿಯಾ ಆ್ಯಕ್ಷನ್ ಕ್ವೀನ್ ಆಗಿಲ್ಲ. ಹೊಡೆದಾಟಗಳಲ್ಲಿ ನೈಜತೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಮಿಥುನ್ ಮುಕುಂದನ್ ಸಂಗೀತದಲ್ಲಿ ಧನಂಜಯ್ ರಚನೆಯ ಗೀತೆ ಅರ್ಥವಾಗುವುದಿಲ್ಲ. ಆದರೆ ಹಿನ್ನೆಲೆ ಸಂಗೀತವನ್ನು ಕ್ಷಮಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದ ಕಾಲಾವಧಿಯನ್ನು ಚಿಕ್ಕದಾಗಿಸಿರುವುದು ಚಿತ್ರಕ್ಕೆ ಪ್ರಮುಖ ಗುಣಾತ್ಮಕ ಅಂಶವೆನಿಸುತ್ತದೆ.

ತಾರಾಗಣ: ಹರಿಪ್ರಿಯಾ, ಸುಮಲತಾ ಅಂಬರೀಷ್
ನಿರ್ದೇಶನ: ಶಂಕರ್ ಜೆ
ನಿರ್ಮಾಣ: ದಿಶಾ ಎಂಟರ್‌ಟೈನ್‌ಮೆನ್ಟ್ಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News