3ನೇ ಮಗುವಿಗೆ ಮತದಾನದ ಹಕ್ಕು ನಿರಾಕರಿಸಬೇಕು ಎಂದ ಬಾಬಾ ರಾಮ್‌ದೇವ್

Update: 2019-05-26 16:08 GMT

ಹರಿದ್ವಾರ, ಮೇ.26: ದೇಶದ ಜನಸಂಖ್ಯೆ ಏರಿಕೆಯನ್ನು ನಿಯಂತ್ರಿಸಲು ಸರಕಾರ ಮೂರನೇ ಮಗುವಿಗೆ ಮತದಾನದ ಹಕ್ಕನ್ನು ನಿಯಂತ್ರಿಸುವ ಕಾನೂನನ್ನು ಜಾರಿಗೆ ತರಬೇಕು ಎಂದು ಯೋಗ ಗುರು ಬಾಬಾ ರಾಮ್‌ದೇವ್ ಅಭಿಪ್ರಾಯಿಸಿದ್ದಾರೆ.

ದೇಶಾದ್ಯಂತ ಮದ್ಯ ತಯಾರಿಕೆ, ಮಾರಾಟ ಮತ್ತು ಖರೀದಿಯ ಮೇಲೆಯೂ ನಿಷೇಧ ಹೇರುವಂತೆ ಆವರು ಆಗ್ರಹಿಸಿದ್ದಾರೆ. ಮುಂದಿನ 50 ವರ್ಷಗಳಲ್ಲಿ ಭಾರತದ ಜನಸಂಖ್ಯೆ 150 ಕೋಟಿ ದಾಟಬಾರದು. ಯಾಕೆಂದರೆ ನಾವು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಸಹಿಸುವ ಶಕ್ತಿ ಹೊಂದಿಲ್ಲ. ಸರಕಾರ, ಮೂರನೇ ಮಗುವಿಗೆ ಮತದಾನದ ಹಕ್ಕು, ಚುನಾವಣೆಗೆ ಸ್ಪರ್ಧಿಸುವ ಹಕ್ಕು ಮತ್ತು ಸರಕಾರ ನೀಡುವ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆಯುವ ಹಕ್ಕನ್ನು ನಿರಾಕರಿಸುವ ಕಾನೂನನ್ನು ಜಾರಿಗೆ ತಂದಾಗ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ಪತ್ರಕರ್ತರನ್ನುದ್ದೇಶಿಸಿ ಮಾತನಾಡುವ ವೇಳೆ ರಾಮ್‌ದೇವ್ ತಿಳಿಸಿದ್ದಾರೆ.

ಹೀಗೆ ಮಾಡಿದಾಗ ಜನರು, ಯಾವುದೇ ಧರ್ಮದವರಾಗಿರಲಿ, ಹೆಚ್ಚು ಮಕ್ಕಳಿಗೆ ಜನ್ಮ ನೀಡುವುದಿಲ್ಲ ಎಂದು ರಾಮ್‌ದೇವ್ ಅಭಿಪ್ರಾಯಿಸಿದ್ದಾರೆ. ಗೋರಕ್ಷಕರು ಮತ್ತು ಗೋಸಾಗಾಟಗಾರರ ಮಧ್ಯೆ ನಡೆಯುವ ಸಂಘರ್ಷವನ್ನು ಕಡಿಮೆ ಮಾಡಲು ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವುದೊಂದೇ ಪರಿಹಾರ ಎಂದು ಯೋಗ ಗುರು ತಿಳಿಸಿದ್ದಾರೆ. ದೇಶದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿದ ರಾಮ್‌ದೇವ್, ಮುಸ್ಲಿಂ ದೇಶಗಳಲ್ಲಿ ಮದ್ಯಪಾನ ನಿಷೇಧಿಸಲಾಗಿದೆ. ಅಲ್ಲಿ ಅದು ಸಾಧ್ಯವಾಗಿರುವಾಗ ನಮ್ಮ ದೇಶದಲ್ಲಿ ಯಾಕೆ ಸಾಧ್ಯವಿಲ್ಲ? ನಮ್ಮದು ಋಷಿಮುನಿಗಳ ನಾಡು. ಭಾರತದಲ್ಲಿ ಮದ್ಯದ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂದು ರಾಮ್‌ದೇವ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News