ಒಡಿಶಾ: ದಾಖಲೆಯ 5ನೇ ಅವಧಿಗೆ ಸರಕಾರ ರಚನೆಯ ಹಕ್ಕು ಮಂಡಿಸಿದ ನವೀನ್ ಪಟ್ನಾಯಕ್

Update: 2019-05-26 16:26 GMT

ಭುವನೇಶ್ವರ,ಮೇ 26: ರವಿವಾರ ಬೆಳಿಗ್ಗೆ ಬಿಜು ಜನತಾದಳ(ಬಿಜೆಡಿ) ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಪಕ್ಷಾಧ್ಯಕ್ಷ ನವೀನ್ ಪಟ್ನಾಯಕ್ ಅವರು ಬಳಿಕ ರಾಜ್ಯಪಾಲ ಗಣೇಶಿ ಲಾಲ್ ಅವರನ್ನು ಭೇಟಿಯಾಗಿ ಸರಕಾರ ರಚನೆಯ ಹಕ್ಕು ಮಂಡಿಸಿದರು. ರಾಜ್ಯಪಾಲರು ಸರಕಾರ ರಚನೆಗೆ ಪಟ್ನಾಯಕ್ ಅವರನ್ನು ಆಹ್ವಾನಿಸಿರುವುದಾಗಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಬುಧವಾರ ನಗರದ ಐಡಿಸಿಒ ಪ್ರದರ್ಶನ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಯಿದ್ದು,ಪಟ್ನಾಯಕ್ ಸತತ ಐದನೇ ಅವಧಿಗೆ ಮುಖ್ಯಮಂತ್ರಿ ಗಾದಿಯನ್ನೇರಲಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಚುನಾವಣೆಗಳು ಪಟ್ನಾಯಕ್ ಪಾಲಿಗೆ ಮಿಶ್ರ ಫಲಿತಾಂಶಗಳನ್ನು ನೀಡಿವೆ. ರಾಜ್ಯದಲ್ಲಿ ಅಧಿಕಾರಕ್ಕೆ ಮರಳುವಲ್ಲಿ ಅವರು ಸಫಲರಾಗಿದ್ದರೂ,ಇದೇ ವೇಳೆ ಬಿಜೆಪಿ ರಾಜ್ಯದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿದೆ. 146 ವಿಧಾನಸಭಾ ಸ್ಥಾನಗಳ ಪೈಕಿ 112ನ್ನು ಗೆದ್ದಿರುವ ಬಿಜೆಡಿ ಕೇವಲ 12 ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಅದು 20 ಸ್ಥಾನಗಳನ್ನು ಗೆದ್ದಿತ್ತು. ಆ ಚುನಾವಣೆಯಲ್ಲಿ 11 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 12 ಸ್ಥಾನಗಳಲ್ಲಿ ವಿಜಯಿಯಾಗಿದೆ. ಜೊತೆಗೆ 23 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಗಳಿಕೆಯನ್ನು 13 ಸ್ಥಾನಗಳಷ್ಟು ಹೆಚ್ಚಿಸಿಕೊಂಡಿದೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಪಟ್ನಾಯಕ್,ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದೊಂದಿಗೆ ರಚನಾತ್ಮಕ ಸಹಕಾರಕ್ಕೆ ತಾನು ಮುಕ್ತ ಮನಸ್ಸು ಹೊಂದಿದ್ದೇನೆ,ಆದರೆ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಅಂತರವನ್ನು ಕಾಯ್ದುಕೊಳ್ಳಲು ಬಯಸಿರುವುದಾಗಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News