ಪಕ್ಷದ ನಾಯಕತ್ವ ಪ್ರಶ್ನಿಸಿದ ಮಂಜೀತ್ ಸಿಂಗ್ ಅಕಾಲಿ ದಳದಿಂದ ಉಚ್ಛಾಟನೆ

Update: 2019-05-27 08:41 GMT

ಚಂಡೀಗಢ, ಮೇ 26: ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಕಾಲಿದಳ ಪಕ್ಷವು ಪಂಜಾಬ್‌ನಲ್ಲಿ ಅತ್ಯಂತ ಕಳಪೆ ಸಾಧನೆ ತೋರಿದ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವದ ಬಗ್ಗೆ ಪ್ರಶ್ನಿಸಿದ್ದ ಹಿರಿಯ ಮುಖಂಡ, ದಿಲ್ಲಿ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿಯ ಮಾಜಿ ಅಧ್ಯಕ್ಷ ಮಂಜೀತ್ ಸಿಂಗ್‌ರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಈ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಮಂಜೀತ್ ಸಿಂಗ್ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಸುವಂತೆ ದಿಲ್ಲಿ ನ್ಯಾಯಾಲಯ ಸೂಚಿಸಿದೆ ಎಂದು ರಾಜ್ಯ ಸಭಾ ಸಂಸದ ಬಲ್ವೀಂದರ್ ಸಿಂಗ್ ಭುಂದರ್ ಹೇಳಿದ್ದಾರೆ.

 2017ರಲ್ಲಿ ದಿಲ್ಲಿ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿಗೆ ನಡೆದಿದ್ದ ಚುನಾವಣೆಯಲ್ಲಿ ಮಂಜೀತ್ ಸಿಂಗ್ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಅಕಾಲಿ ದಳದ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಆದರೆ ಚುನಾವಣೆಯ ಪ್ರಚಾರದ ಸಂದರ್ಭ ಅಕಾಲಿ ದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್‌ರ ಫೋಟೊವನ್ನು ಬಳಸಿರಲಿಲ್ಲ. 2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಕಾಲಿ ದಳದ ಕಳಪೆ ಸಾಧನೆಯ ಬಳಿಕ ಮಂಜೀತ್ ಸಿಂಗ್ ಅವರು ಸುಖ್‌ಬೀರ್‌ರನ್ನು ಸಮಯ ಸಿಕ್ಕಾಗಲೆಲ್ಲಾ ಟೀಕಿಸುತ್ತಿದ್ದರು ಎಂದು ಅಕಾಲಿ ದಳದ ಮುಖಂಡರೊಬ್ಬರು ತಿಳಿಸಿದ್ದಾರೆ.

ಮಂಜೀತ್ ಸಿಂಗ್ ನೇತೃತ್ವದ ಸಮಿತಿ ಸುಮಾರು 51 ಲಕ್ಷ ರೂ. ಮೊತ್ತದ ಅವ್ಯವಹಾರ ಎಸಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯದ ಆದೇಶದ ಆಧಾರದಲ್ಲಿ ಮಂಜೀತ್‌ರನ್ನು ಈಗ ಪಕ್ಷದಿಂದ ಉಚ್ಛಾಟಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅಕಾಲಿ ದಳದ ಹೇಳಿಕೆ ತಿಳಿಸಿದೆ.

 ಪಂಜಾಬ್‌ನಲ್ಲಿ ಪಕ್ಷದ ಕಳಪೆ ಸಾಧನೆಯಿಂದ ಆಗಿರುವ ಅವಮಾನವನ್ನು ಮರೆಮಾಚಲು ತನ್ನನ್ನು ಉಚ್ಛಾಟಿಸಲಾಗಿದೆ . ದೇಶದೆಲ್ಲೆಡೆ ಮೋದಿ ಅಲೆಯಿದ್ದರೂ ಪಂಜಾಬ್‌ನಲ್ಲಿ ಅಕಾಲಿ ದಳದ ನಾಯಕರ ನಿಷ್ಕ್ರಿಯತೆಯಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ತನ್ನನ್ನು ಉಚ್ಛಾಟಿಸಲಾಗಿದೆ ಎಂದು ಮಂಜೀತ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News