ನೂತನ ಲೋಕಸಭೆಯ ರಚನೆ, ಕಲಾಪ ಆರಂಭ ಹೇಗೆ ಮತ್ತು ಯಾವಾಗ: ಇಲ್ಲಿದೆ ಸಂಪೂರ್ಣ ಮಾಹಿತಿ

Update: 2019-05-29 14:06 GMT

2019ರ ಸಾರ್ವತ್ರಿಕ ಚುನಾವಣೆಗಳು ಮುಗಿದು ಫಲಿತಾಂಶ ಈಗಾಗಲೇ ಹೊರಬಿದ್ದಾಗಿದೆ. ಬಹುಮತವನ್ನು ಗಳಿಸಿರುವ ಎನ್‌ಡಿಎ ಸರಕಾರ ರಚನೆಗೆ ಸಜ್ಜಾಗಿದೆ. ನರೇಂದ್ರ ಮೋದಿ ಅವರು ಮೇ 30ರಂದು ಸತತ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 17ನೇ ಲೋಕಸಭೆ ಹೇಗೆ ರಚನೆಯಾಗುತ್ತದೆ,ಅದು ತನ್ನ ಕಲಾಪವನ್ನು ಎಂದು ಆರಂಭಿಸುತ್ತದೆ ಇತ್ಯಾದಿಗಳ ಬಗ್ಗೆ ಜನರಲ್ಲಿ ಕುತೂಹಲವಿದೆ. ಈ ಬಗ್ಗೆ ಅಗತ್ಯ ಮಾಹಿತಿಗಳು ಇಲ್ಲಿವೆ.....

17ನೇ ಲೋಕಸಭೆ ಯಾವಾಗ ರಚನೆಯಾಗುತ್ತದೆ?

ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಮೇ 25ರಂದು ಲೋಕಸಭೆಗೆ ಆಯ್ಕೆಗೊಂಡ ನೂತನ ಸದಸ್ಯರ ಹೆಸರುಗಳನ್ನು ಚುನಾವಣಾ ಆಯೋಗವು ತನ್ನ ಅಧಿಸೂಚನೆಯಲ್ಲಿ ಪ್ರಕಟಿಸಿತ್ತು. ಅದೇ ದಿನ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಹಾಗೂ ಚುನಾವಣಾ ಆಯುಕ್ತರಾದ ಅಶೋಕ್ ಲವಾಸಾ ಮತ್ತು ಸುಶೀಲ್ ಚಂದ್ರ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾಗಿ ಅಧಿಸೂಚನೆಯ ಪ್ರತಿಯನ್ನು ಅವರಿಗೆ ಸಲ್ಲಿಸಿದ್ದಾರೆ.

ನೂತನ ಲೋಕಸಭೆಯ ಮೊದಲ ಅಧಿವೇಶನವನ್ನು ಹೇಗೆ ಕರೆಯಲಾಗುತ್ತದೆ?

ಮೇ 30ರಂದು ಅಧಿಕಾರ ಸ್ವೀಕರಿಸಿದ ಬಳಿಕ ಗೃಹಸಚಿವರ ಅಧ್ಯಕ್ಷತೆಯ ಸಂಸದೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿ(ಸಿಸಿಪಿಎ)ಯು ಸಭೆ ಸೇರಿ 17ನೇ ಲೋಕಸಭೆಯ ಮೊದಲ ಅಧಿವೇಶನದ ದಿನಾಂಕಗಳನ್ನು ನಿರ್ಧರಿಸುತ್ತದೆ. ಬಳಿಕ ಲೋಕಸಭಾ ಮತ್ತು ರಾಜ್ಯಸಭಾ ಅಧಿವೇಶನವನ್ನು ಕರೆಯುವಂತೆ ಕೋರಿಕೆಯೊಂದಿಗೆ ಸಿಸಿಪಿಎ ರಾಷ್ಟ್ರಪತಿಗಳಿಗೆ ಶಿಫಾರಸನ್ನು ಸಲ್ಲಿಸುತ್ತದೆ.

ಲೋಕಸಭೆಯ ಮೊದಲ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸುತ್ತಾರೆ?

ಪ್ರೊಟೆಮ್ ಸ್ಪೀಕರ್ ಅಥವಾ ಹಂಗಾಮಿ ಸ್ಪೀಕರ್ ಮೊದಲ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸುತ್ತಾರೆ. ರಾಷ್ಟ್ರಪತಿಗಳು ಸಂಸದೀಯ ಅನುಭವವನ್ನು ಮುಖ್ಯವಾಗಿಟ್ಟುಕೊಂಡು ನೂತನವಾಗಿ ಚುನಾಯಿತ ಲೋಕಸಭೆಯ ಅತ್ಯಂತ ಹಿರಿಯ ಸದಸ್ಯರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕಗೊಳಿಸುತ್ತಾರೆ. 17ನೇ ಲೋಕಸಭೆಯಲ್ಲಿ ಎಂಟನೇ ಬಾರಿಗೆ ಆಯ್ಕೆಯಾಗಿರುವ ಸಂತೋಷ ಗಂಗ್ವಾರ್ ಮತ್ತು ಮೇನಕಾ ಗಾಂಧಿ ಅವರು ಅತ್ಯಂತ ಹಿರಿಯ ಸದಸ್ಯರಾಗಿದ್ದಾರೆ. ಆದರೆ ಗಂಗ್ವಾರ್ ಮತ್ತು ಗಾಂಧಿ ಸಚಿವರಾಗಿ ಸಂಪುಟದಲ್ಲಿ ಸೇರ್ಪಡೆಗೊಂಡಿದ್ದರೆ ಏಳನೇ ಬಾರಿಗೆ ಆಯ್ಕೆಯಾಗಿರುವ ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ,ಬಿಜೆಪಿ ನಾಯಕ ವೀರೇಂದ್ರ್ ಕುಮಾರ್ ಮತ್ತು ಕಾಂಗ್ರೆಸ್ ನಾಯಕ ಕೊಡಿಕುನ್ನಿಲ್ ಸುರೇಶ ಅವರು ಅತ್ಯಂತ ಹಿರಿಯ ಸದಸ್ಯರಾಗುತ್ತಾರೆ.

ಲೋಕಸಭೆಯ ಮೊದಲ ಅಧಿವೇಶನದಲ್ಲಿ ಏನಾಗುತ್ತದೆ?

ಹಂಗಾಮಿ ಸ್ಪೀಕರ್ ಅವರು ನೂತನವಾಗಿ ಆಯ್ಕೆಯಾಗಿರುವ ಲೋಕಸಭಾ ಸದಸ್ಯರಿಗೆ ಪ್ರಮಾಣ ವಚನವನ್ನು ಬೋಧಿಸುತ್ತಾರೆ. ಅವರು ಲೋಕಸಭೆಯ ಸ್ಪೀಕರ್ ಆಯ್ಕೆ ಪ್ರಕ್ರಿಯೆಯ ಅಧ್ಯಕ್ಷತೆಯನ್ನೂ ವಹಿಸುತ್ತಾರೆ. ಮೊದಲ ಅಧಿವೇಶನದ ಮೊದಲ ಎರಡು ದಿನಗಳಲ್ಲಿ ಎಲ್ಲ 542 ಸದಸ್ಯರಿಗೆ ಪ್ರಮಾಣ ವಚನವನ್ನು ಬೋಧಿಸಲಾಗುತ್ತದೆ.

ಸ್ಪೀಕರ್ ಯಾವಾಗ ಆಯ್ಕೆಯಾಗುತ್ತಾರೆ?

 ಅಧಿವೇಶನದ ಮೂರನೇ ದಿನ ಲೋಕಸಭೆಯು ನೂತನ ಸದಸ್ಯಲ್ಲೋರ್ವರನ್ನು ತನ್ನ ಸ್ಪೀಕರ್ ಆಗಿ ಆಯ್ಕೆ ಮಾಡುತ್ತದೆ. ಸಂಪ್ರದಾಯದಂತೆ ಸ್ಪೀಕರ್ ಸರ್ವಾನುಮತದಿಂದ ಆಯ್ಕೆಯಾಗುತ್ತಾರೆ. ನೂತನ ಸ್ಪೀಕರ್ ಆಯ್ಕೆಯ ಬಳಿಕ ಹಂಗಾಮಿ ಸ್ಪೀಕರ್ ಅಧಿಕಾರವು ಅಂತ್ಯಗೊಳ್ಳುತ್ತದೆ.

ರಾಷ್ಟ್ರಪತಿಗಳು ಜಂಟಿ ಸದನವನ್ನುದ್ದೇಶಿಸಿ ಯಾವಾಗ ಭಾಷಣ ಮಾಡುತ್ತಾರೆ?

ಸ್ಪೀಕರ್ ಆಯ್ಕೆಯ ಮರುದಿನ ರಾಷ್ಟ್ರಪತಿಗಳು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣವನ್ನು ಮಾಡುತ್ತಾರೆ. ಸರಕಾರವು ಸಿದ್ಧಪಡಿಸುವ ಈ ಭಾಷಣವು ಪ್ರಸಕ್ತ ವರ್ಷಕ್ಕಾಗಿ ಅದರ ನೀತಿ ಯೋಜನೆಗಳು ಮತ್ತು ಶಾಸಕಾಂಗ ಕಾರ್ಯಸೂಚಿಯನ್ನು ಒಳಗೊಂಡಿರುತ್ತದೆ.

2019ರಲ್ಲಿ ರಾಷ್ಟ್ರಪತಿಗಳು ಮತ್ತೊಮ್ಮೆ ಸಂಸತ್ತನ್ನುದ್ದೇಶಿಸಿ ಭಾಷಣ ಮಾಡುತ್ತಿರುವುದು ಏಕೆ?

ಸಂವಿಧಾನಕ್ಕೆ ಅನುಗುಣವಾಗಿ ಪ್ರತಿ ಸಾರ್ವತ್ರಿಕ ಚುನಾವಣೆಯ ಬಳಿಕ ಮತ್ತು ಪ್ರತಿ ವರ್ಷ ಸಂಸತ್ತಿನ ಮೊದಲ ಅಧಿವೇಶನಕ್ಕೆ ಮುನ್ನ ರಾಷ್ಟ್ರಪತಿಗಳು ಜಂಟಿ ಸದನವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. 2019ರ ಮೊದಲ ಅಧಿವೇಶನ ಪ್ರಸಕ್ತ ವರ್ಷದ ಜ.31ರಂದು ಆರಂಭಗೊಂಡಿತ್ತು ಮತ್ತು ಅದು 16ನೇ ಲೋಕಸಭೆಯ ಕೊನೆಯ ಅಧಿವೇಶನವೂ ಆಗಿತ್ತು.

ರಾಷ್ಟ್ರಪತಿಗಳ ಭಾಷಣದ ನಂತರ ಏನಾಗುತ್ತದೆ?

ರಾಷ್ಟ್ರಪತಿಗಳ ಭಾಷಣದ ಮರುದಿನ ಲೋಕಸಭೆ ಮತ್ತು ರಾಜ್ಯಸಭೆ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಕೈಗೆತ್ತಿಕೊಳ್ಳುತ್ತವೆ. ಸರಕಾರದ ಕಾರ್ಯಸೂಚಿಯನ್ನು ಒಪ್ಪದ ಸದಸ್ಯರು ತಿದ್ದುಪಡಿಗಳನ್ನು ಮಂಡಿಸಬಹುದು. ಪ್ರಧಾನಿಗಳು ಉತ್ತರ ನೀಡಿದ ಬಳಿಕ ವಂದನಾ ನಿರ್ಣಯ ಮೇಲಿನ ಚರ್ಚೆಯು ಅಂತ್ಯಗೊಳ್ಳುತ್ತದೆ ಮತ್ತು ಅಧಿವೇಶನವು ತನ್ನ ಶಾಸಕಾಂಗ ಕಲಾಪಗಳನ್ನು ಆರಂಭಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News