ಭಾರತದ ಗಡಿಭಾಗದಲ್ಲಿ ವಾಯುಪ್ರದೇಶ ನಿಷೇಧ: ಜೂನ್ 14ರವರೆಗೆ ವಿಸ್ತರಿಸಿದ ಪಾಕ್

Update: 2019-05-29 17:13 GMT

ಇಸ್ಲಮಾಬಾದ್, ಮೇ 29: ಭಾರತದೊಂದಿಗಿನ ಪೂರ್ವ ಗಡಿಭಾಗದಲ್ಲಿರುವ ವಾಯುಪ್ರದೇಶವನ್ನು ಪಾಕಿಸ್ತಾನವು ಕಳೆದ ಫೆಬ್ರವರಿಯಲ್ಲಿ ಮುಚ್ಚಿದ್ದು, ಈ ನಿಷೇಧವನ್ನು ಜೂನ್ 14ರವರೆಗೆ ವಿಸ್ತರಿಸಲಾಗಿದೆ ಎಂದು ಪಾಕಿಸ್ತಾನದ ನಾಗರಿಕ ವಿಮಾನಯಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಪಾಕ್ ಮೂಲದ ಭಯೋತ್ಪಾದಕರ ತಂಡವು ಕಾಶ್ಮೀರದ ಪುಲ್ವಾಮದಲ್ಲಿ ನಡೆಸಿದ ಆತ್ಮಾಹುತಿ ದಾಳಿ ಹಾಗೂ ಇದಕ್ಕೆ ಉತ್ತರವಾಗಿ ಭಾರತದ ವಾಯುಪಡೆ ಪಾಕಿಸ್ತಾನದ ಬಾಲಕೋಟ್ ಮೇಲೆ ನಡೆಸಿದ ವಾಯುದಾಳಿಯ ಬಳಿಕ ಪಾಕಿಸ್ತಾನವು ಭಾರತದೊಂದಿಗಿನ ಪೂರ್ವ ಗಡಿಭಾಗದಲ್ಲಿರುವ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. ವಾಯುಪ್ರದೇಶ ಮುಚ್ಚುವಿಕೆ ನಿಷೇಧವು ಜೂನ್ 14ರವರೆಗೆ ಮುಂದುವರಿಯಲಿದೆ ಎಂದು ಪಾಕ್ ನಾಗರಿಕ ವಿಮಾನಯಾನ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ.

 ಪಾಕಿಸ್ತಾನವು ಮಹತ್ವದ ವಾಯುಯಾನ ಕಾರಿಡಾರ್‌ನ ಮಧ್ಯೆ ಇರುವುದರಿಂದ ವಾಯುಪ್ರದೇಶ ನಿಷೇಧದಿಂದ ದಿನಂಪ್ರತಿ ಈ ಮಾರ್ಗವಾಗಿ ಸಂಚರಿಸುವ ನೂರಾರು ವಾಣಿಜ್ಯ ಮತ್ತು ಸರಕು ಸಾಗಾಟದ ವಿಮಾನಗಳ ಪ್ರಯಾಣದ ಮೇಲೆ ಪರಿಣಾಮ ಬೀರಿದೆ. ವಿಮಾನಯಾನ ಅವಧಿ ಹೆಚ್ಚುವ ಜೊತೆಗೆ ತೈಲ ವೆಚ್ಚದಲ್ಲೂ ಹೆಚ್ಚಳವಾಗಿದೆ. ವಿದೇಶದ ವಿಮಾನಗಳು ಸುತ್ತು ಬಳಸಿ ಭಾರತ ಪ್ರವೇಶಿಸುವಂತಾಗಿದೆ. ದಕ್ಷಿಣ ಏಶ್ಯಾದಿಂದ ಯುರೋಪ್‌ಗೆ ಸಂಚರಿಸುವ ವಿಮಾನಗಳ ಪ್ರಯಾಣದ ಮೇಲೆ ಇದರಿಂದ ಹೆಚ್ಚಿನ ಪರಿಣಾಮ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News