ಆಗಸ್ಟ್ ಗೆ ಮುನ್ನ ಬೋಯಿಂಗ್ 737-ಮ್ಯಾಕ್ಸ್ ವಿಮಾನ ಸೇವೆಗೆ ಮರಳದು

Update: 2019-05-29 18:22 GMT

ಸಿಯೋಲ್ (ದಕ್ಷಿಣ ಕೊರಿಯ), ಮೇ 29: ವಿಮಾನ ನಿರ್ಮಾಣ ಕಂಪೆನಿ ಬೋಯಿಂಗ್‌ನ 737 ಮ್ಯಾಕ್ಸ್ ವಿಮಾನ ಆಗಸ್ಟ್‌ವರೆಗೆ ಸೇವೆಗೆ ಮರಳುವ ಸಾಧ್ಯತೆಯಿಲ್ಲ ಎಂದು ಅಂತರ್‌ರಾಷ್ಟ್ರೀಯ ವಾಯು ಸಾರಿಗೆ ಅಸೋಸಿಯೇಶನ್ (ಐಎಟಿಎ) ಬುಧವಾರ ಹೇಳಿದೆ.

ಇಥಿಯೋಪಿಯನ್ ಏರ್‌ಲೈನ್ಸ್‌ಗೆ ಸೇರಿದ ಬೋಯಿಂಗ್ 737 ಮ್ಯಾಕ್ಸ್ 8 ಮಾದರಿಯ ವಿಮಾನವೊಂದು ಮಾರ್ಚ್‌ನಲ್ಲಿ ಪತನಗೊಂಡ ಬಳಿಕ ಜಗತ್ತಿನ ಎಲ್ಲ ವಿಮಾನಯಾನ ಕಂಪೆನಿಗಳು ಈ ಮಾದರಿಯ ವಿಮಾನಗಳನ್ನು ಸೇವೆಯಿಂದ ಹಿಂದಕ್ಕೆ ಪಡೆದಿರುವುದನ್ನು ಸ್ಮರಿಸಬಹುದಾಗಿದೆ. ಆ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲ 157 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಅದಕ್ಕೂ ಐದು ತಿಂಗಳು ಮೊದಲು, ಅಂದರೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇಂಡೋನೇಶ್ಯದ ಲಯನ್ ಏರ್ ಸಂಸ್ಥೆಗೆ ಸೇರಿದ ಇದೇ ಮಾದರಿಯ ವಿಮಾನವು ಜಾವಾ ಸಮುದ್ರದಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲ 189 ಮಂದಿ ಮೃತಪಟ್ಟಿದ್ದಾರೆ.

 ‘‘ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳು ಇನ್ನು 10-12 ವಾರಗಳ ಮೊದಲು ಸೇವೆಗೆ ಮರಳುವುದನ್ನು ನಾವು ನಿರೀಕ್ಷಿಸುವಂತಿಲ್ಲ’’ ಎಂದು ಐಎಟಿಎ ಮಹಾ ನಿರ್ದೇಶಕ ಅಲೆಕ್ಸಾಂಡರ್ ಡಿ ಜೂನಿಯಕ್ ಸಿಯೋಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ‘‘ಆದರೆ, ಅದು ನಮ್ಮ ಕೈಯಲ್ಲಿಲ್ಲ. ದೇಶಗಳ ವಾಯುಯಾನ ನಿಯಂತ್ರಣ ಇಲಾಖೆಗಳ ಕೈಯಲ್ಲಿವೆ’’ ಎಂದು ಅವರು ನುಡಿದರು.

ಶೀಘ್ರದಲ್ಲೇ ಸಂಬಂಧಪಟ್ಟ ಎಲ್ಲರ ಸಮ್ಮೇಳನ

ಬೋಯಿಂಗ್‌ನ 737 ಮ್ಯಾಕ್ಸ್ ವಿಮಾನವು ಮತ್ತೆ ಸೇವೆಗೆ ಮರಳಬೇಕಾದರೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚಿಸಲು ಇನ್ನು 5-7 ವಾರಗಳಲ್ಲಿ ವಾಯುಯಾನ ಸಂಸ್ಥೆಗಳು, ನಿಯಂತ್ರಕ ಇಲಾಖೆಗಳು ಮತ್ತು ಉತ್ಪಾದಕರ ಸಮ್ಮೇಳನವೊಂದನ್ನು ಏರ್ಪಡಿಸುವ ಬಗ್ಗೆ ಐಎಟಿಎ ಪರಿಶೀಲನೆ ನಡೆಸುತ್ತಿದೆ ಎಂದು ಅಲೆಕ್ಸಾಂಡರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News