ಟ್ವಿಟರ್ ನಲ್ಲಿ ವಿಶ್ವಾದ್ಯಂತ ಟ್ರೆಂಡ್ ಆದ ‘ಪ್ರೇ_ಫಾರ್ ನೇಸಮಣಿ'!

Update: 2019-05-30 09:19 GMT
Twitter/Dhanush_05

ಚೆನ್ನೈ, ಮೇ 30: ಟ್ವಿಟರ್ ನಲ್ಲಿ ತಮಿಳಿಗರ ಭಾಗವಹಿಸುವಿಕೆ ಎಷ್ಟಿದೆ ಎಂಬುವುದನ್ನು ಸದ್ಯಕ್ಕೆ ವಿಶ್ವಾದ್ಯಂತ ಟ್ರೆಂಡ್ ಆಗುತ್ತಿರುವ ‘ಪ್ರೇ ಫಾರ್ ನೇಸಮಣಿ’ ಹ್ಯಾಶ್ ಟ್ಯಾಗ್ ಸಾಬೀತುಪಡಿಸಿದೆ.

ನೇಸಮಣಿ ಎನ್ನುವುದು ಫ್ರೆಂಡ್ಸ್ ಚಿತ್ರದಲ್ಲಿ ಖ್ಯಾತ ಹಾಸ್ಯ ನಟ ವಡಿವೇಲು ನಿರ್ವಹಿಸಿದ ಪಾತ್ರದ ಹೆಸರು. ಈ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗುತ್ತಿದ್ದಂತೆಯೇ "ಹೂ ಈಸ್ ನೇಸಮಣಿ?'' ಎಂದು ಹಲವರು ಪ್ರಶ್ನಿಸಲಾರಂಭಿಸಿದ್ದು, ಈತನೊಬ್ಬ ಖ್ಯಾತ ತಮಿಳು ಸೆಲೆಬ್ರಿಟಿ ಹಾಗೂ ಆಸ್ಪತ್ರೆಯಲ್ಲಿದ್ದಾನೆ ಎಂದು ಅಂದುಕೊಳ್ಳಲು ಆರಂಭಿಸಿದ್ದರು.

ವಾಸ್ತವವಾಗಿ ನೇಸಮಣಿ 2001ರ ಹಿಟ್ ತಮಿಳು ಚಿತ್ರ `ಫ್ರೆಂಡ್ಸ್' ಇದರ ಒಂದು ಪಾತ್ರ. ಚಿತ್ರದಲ್ಲಿ ಈ ಪಾತ್ರಧಾರಿಯು (ವಡಿವೇಲು) ತಲೆಗೆ ಸುತ್ತಿಗೆ ಬಿದ್ದು ಗಾಯಗೊಳ್ಳುತ್ತಾನೆ. ಆತನ ತಲೆಗೆ ಆಕಸ್ಮತ್ತಾಗಿ ಸುತ್ತಿಗೆ ಬೀಳಿಸಿದವನು ಚಿತ್ರದಲ್ಲಿ ಆತನ ಸಹಾಯಕನಾಗಿ ಅಭಿನಯಿಸಿದ್ದ ಕೃಷ್ಣಮೂರ್ತಿ (ರಮೇಶ್ ಖನ್ನ).

ಈ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಭಾಗವಾಗಿ ಚೆನ್ನೈ ಸೂಪರ್ ಕಿಂಗ್ಸ್, ಕೆಟಿವಿ, ಹಲವು ಸೆಲೆಬ್ರಿಟಿಗಳು ಹಾಗೂ ರಾಜಕೀಯ ನೇತಾರರೂ ಸೇರಿಕೊಂಡಿದ್ದು ವಿಶೇಷವಾಗಿತ್ತು.

ಅಂತೂ ಇಂತೂ ವಿಜಯ್-ಸೂರ್ಯ ಅಭಿನಯದ `ಫ್ರೆಂಡ್ಸ್' ಚಿತ್ರದ  ವಡಿವೇಲು ಪಾತ್ರ ಚಿತ್ರ ಬಿಡುಗಡೆಗೊಂಡು 18 ವರ್ಷಗಳ ನಂತರ ಮತ್ತೊಮ್ಮೆ ಪ್ರಸಿದ್ಧವಾಗಿದೆ.

ಹೇಗೆ ಆರಂಭಗೊಂಡಿತು ?

ಪಾಕ್ ಮೂಲದ ಮೀಮ್ ಪುಟ ಸಿವಿಲ್ ಇಂಜಿನಿಯರಿಂಗ್ ಲರ್ನರ್ಸ್, ಸುತ್ತಿಗೆಯ ಫೋಟೋ ಪೋಸ್ಟ್ ಮಾಡಿ ``ನಿಮ್ಮ ದೇಶದಲ್ಲಿ ಈ ಸಾಧನದ ಹೆಸರೇನು?'' ಎಂದು ಪ್ರಶ್ನಿಸಿತ್ತು.

ಈ ಟ್ವೀಟ್ ಪೋಸ್ಟ್ ಆಗಿದ್ದೇ ತಡ ಉತ್ಸಾಹಿ ವಡಿವೇಲು ಅಭಿಮಾನಿಯೊಬ್ಬ ಪ್ರತಿಕ್ರಿಯಿಸಿ, “ನಾವು ಇದಕ್ಕೆ ಸುತ್ತಿಗೆ ಎಂದು ಕರೆಯುತ್ತೇವೆ. ನಾವು ಯಾವುದಾದರೂ ವಸ್ತುವಿನ ಮೇಲೆ ಹೊಡೆದಾಗ ‘ಟಂಗ್ ಟಂಗ್’ ಎಂದು ಸದ್ದು ಬರುತ್ತದೆ. ಜಮೀನ್ ಪ್ಯಾಲೇಸ್ ನಲ್ಲಿ ಪೈಂಟಿಂಗ್ ಕಾಂಟ್ರಾಕ್ಟರ್ ನೇಸಮಣಿಯ ತಲೆ ಇದರಿಂದ ಒಡೆದಿದೆ. ಪಾಪ” ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದರು.  

ಇನ್ನೊಬ್ಬ ಟ್ವಿಟ್ಟರಿಗ "ಈಸ್ ಹೀ ಓಕೆ?'' ಎಂದು ಟ್ವೀಟ್ ಮಾಡಿದ್ದೇ ತಡ ಟ್ವೀಟ್ ಗಳ ಸರಮಾಲೆಯೇ ಆಗಮಿಸಲಾರಂಭಿಸಿತ್ತು.

ರಾಜಕಾರಣಿಗಳ ಹೊರತಾಗಿ ಪತ್ರಕರ್ತರೂ ಈ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಭಾಗವಾಗಿ ಬಿಟ್ಟರು. ನಿಪ್ಪಾನ್ ಇಂಡಿಯಾ ಪೈಂಟ್ ಕಂಪೆನಿ ಕೂಡ  ಹಾಸ್ಯ ಭರಿತ ಟ್ವೀಟ್ ಮಾಡಿ ``ನಮ್ಮ ವೃತ್ತಿಪರ ಪೈಂಟರುಗಳು ನಿಮ್ಮ ತಲೆಗೆ ಸುತ್ತಿಗೆಗಳು ಬೀಳಲು ಬಿಡುವುದಿಲ್ಲ,'' ಎಂದು ಆಕರ್ಷಕ ಮೀಮ್ ಪೋಸ್ಟ್ ಮಾಡಿತ್ತು.

ಕ್ರಿಕೆಟಿಗ ಹರ್ಭಜನ್ ಸಿಂಗ್, ಕೆಟಿವಿ, ಚೆನ್ನೈ ಸೂಪರ್ ಕಿಂಗ್ಸ್, ಸೋನಿ ಮ್ಯೂಸಿಕ್ ಸೌಥ್ ಮೊದಲಾದ ಟ್ವಿಟರ್ ಹ್ಯಾಂಡಲ್ ಗಳು ನೇಸಮಣಿಯ ಬಗ್ಗೆ ಟ್ವೀಟ್ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News