ಮಾವಿನ ಹಣ್ಣು ಕಿತ್ತ ದಲಿತನನ್ನು ಥಳಿಸಿ ಕೊಂದರು!

Update: 2019-05-30 10:28 GMT

ರಾಜಮಹೇಂದ್ರವರಂ, ಮೇ 30: ಮೇಲ್ಜಾತಿಯ ವ್ಯಕ್ತಿಯೊಬ್ಬನಿಗೆ ಸೇರಿದ ಮಾವಿನ ತೋಪಿನಿಂದ ಮಾವಿನ ಹಣ್ಣುಗಳನ್ನು ಕೀಳುತ್ತಿದ್ದ ದಲಿತನೊಬ್ಬನನ್ನು ಥಳಿಸಿ ಕೊಂದ ಘಟನೆ ಪೂರ್ವ ಗೋದಾವರಿ ಜಿಲ್ಲೆಯ ರಂಗಂಪೇಟ ಮಂಡಲದ ಸಿಂಗಂಪಳ್ಳಿ ಎಂಬ ಗ್ರಾಮದಲ್ಲಿ ಉದ್ವಿಗ್ನತೆಯ ವಾತಾವರಣ ಸೃಷ್ಟಿಸಿದೆ. ಮೃತ ವ್ಯಕ್ತಿಯನ್ನು ಬಿಕ್ಕಿ ಶ್ರೀನಿವಾಸ್ (30) ಎಂದು ಗುರುತಿಸಲಾಗಿದೆ.

ಆತ ಮಾವಿನ ಹಣ್ಣುಗಳನ್ನು ಕೀಳುತ್ತಿರುವುದನ್ನು ನೋಡಿದ ಮಾವಿನ ತೋಪಿನ ಮಾಲಕ ಮತ್ತಿತರರು ಆತನನ್ನು ಬೆಂಬತ್ತಿ ಹಿಡಿದು ಕೋಲುಗಳಿಂದ ಥಳಿಸಿ ಸಾಯಿಸಿದ್ದರೆನ್ನಲಾಗಿದೆ. ನಂತರ ಅವರು ಮೃತದೇಹವನ್ನು ಪಂಚಾಯತ್ ಕಚೇರಿಗೆ ಕೊಂಡು ಹೋಗಿ ಅಲ್ಲಿ ಸೀಲಿಂಗ್ ಗೆ ಮೃತದೇಹವನ್ನು ನೇತು ಹಾಕಿಸಿದ್ದಾರೆಂದು ಆರೋಪಿಸಲಾಗಿದೆ. ಮಾವಿನ ಹಣ್ಣು ಕದಿಯುತ್ತಿದ್ದಾಗ ಸಿಕ್ಕಿ ಬಿದ್ದು ಅವಮಾನದಿಂದ ಆತ ಆತ್ಮಹತ್ಯೆಗೈದಿದ್ದಾನೆಂದು ಬಿಂಬಿಸುವ ಯತ್ನ ಇದೆಂದು ಹೇಳಲಾಗಿದೆ.

ಆದರೆ ಶ್ರೀನಿವಾಸ್ ಮೈ ತುಂಬಾ ಇದ್ದ ಗಾಯಗಳನ್ನು ಗಮನಿಸಿದ ಗ್ರಾಮಸ್ಥರಿಗೆ ಸಂಶಯವುಂಟಾಗಿತ್ತು. ಈ ಸುದ್ದಿ ಹರಡುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಸಭೆ ಸೇರಿ ಹಂತಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರಲ್ಲದೆ ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ/ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯಂತೆ ಪ್ರಕರಣ ದಾಖಲಿಸುವಂತೆಯೂ ಮನವಿ ಮಾಡಿದ್ದಾರೆ. ಮಾಜಿ ಸಂಸದ ಜಿ ವಿ ಹರ್ಷ ಕುಮಾರ್ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News