ಕಳೆದ ಅವಧಿಯ ಈ ಐವರು ಪ್ರಭಾವಿಗಳಿಗೆ ಸಿಕ್ಕಿಲ್ಲ ಈ ಬಾರಿ ಮಂತ್ರಿ ಪದವಿಯ ಭಾಗ್ಯ !
ಹೊಸದಿಲ್ಲಿ , ಮೇ 30 : ನರೇಂದ್ರ ಮೋದಿ ಅವರ ಮೊದಲ ಅವಧಿಯ ಸರಕಾರದಲ್ಲಿ ಪ್ರಭಾವಿ ಸಚಿವರಾಗಿ ಗಮನ ಸೆಳೆದಿದ್ದ ಐವರು ಈ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿಲ್ಲ.
ಕಳೆದ ಅವಧಿಯಲ್ಲಿ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ, ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ , ಕ್ರೀಡಾ ಸಚಿವರಾಗಿದ್ದ ರಾಜ್ಯವರ್ಧನ್ ಸಿಂಗ್ ರಾಥೋಡ್ , ನಾಗರೀಕ ವಿಮಾನ ಯಾನ ಖಾತೆ ರಾಜ್ಯ ಸಚಿವರಾಗಿದ್ದ ಜಯಂತ್ ಸಿನ್ಹ ಹಾಗು ಅರೋಗ್ಯ ಸಚಿವರಾಗಿದ್ದ ಜೆ ಪಿ ನಡ್ಡಾ ಅವರು ಈ ಬಾರಿ ಸಚಿವರಾಗಿಲ್ಲ.
ಈ ಪೈಕಿ ಅರುಣ್ ಜೇಟ್ಲಿ ಅವರು ಅನಾರೋಗ್ಯದ ಕಾರಣ ನೀಡಿ ಸ್ವತಃ ಮಂತ್ರಿ ಪದವಿ ಬೇಡ ಎಂದು ಪ್ರಧಾನಿಗೆ ಪತ್ರ ಬರೆದಿದ್ದರು. ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹಿಂದೆ ಸರಿದಿದ್ದ ಸುಷ್ಮಾ ಸಂಪುಟ ಸೇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹಾಗಾಗಿಲ್ಲ.
ರಾಜ್ಯವರ್ಧನ್ ಹಾಗು ಬಿಜೆಪಿ ಬಿಟ್ಟಿರುವ ಬಂಡಾಯ ನಾಯಕ ಯಶವಂತ್ ಸಿನ್ಹ ಅವರ ಪುತ್ರ ಜಯಂತ್ ಸಿನ್ಹ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಕ್ಕಿಲ್ಲ. ಜೆ ಪಿ ನಡ್ಡಾ ಅವರು ಅಮಿತ್ ಷಾ ಜಾಗಕ್ಕೆ ಬಿಜೆಪಿ ಅಧ್ಯಕ್ಷರಾಗಿ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.