ಅಮೆರಿಕ ಜೊತೆ ಸಂಧಾನವಿಲ್ಲ: ಇರಾನ್ ಸರ್ವೋಚ್ಛ ನಾಯಕ ಖಾಮಿನೈ ಘೋಷಣೆ

Update: 2019-05-30 18:02 GMT

ಲಂಡನ್, ಮೇ 30: ಅಮೆರಿಕದೊಂದಿಗೆ ಇರಾನ್ ಸಂಧಾನ ನಡೆಸುವುದಿಲ್ಲ ಎಂದು ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಬುಧವಾರ ಹೇಳಿದ್ದಾರೆ. ಇರಾನ್ ವಿರುದ್ಧದ ಆರ್ಥಿಕ ದಿಗ್ಬಂಧನಗಳನ್ನು ತೆರವುಗೊಳಿಸಿದರೆ ಅಮೆರಿಕದೊಂದಿಗೆ ಮಾತುಕತೆ ಸಾಧ್ಯವಾಗಬಹುದು ಎಂಬ ಇಂಗಿತವನ್ನು ಅಧ್ಯಕ್ಷ ಹಸನ್ ರೂಹಾನಿ ವ್ಯಕ್ತಪಡಿಸಿದ ಬಳಿಕ, ಇರಾನ್‌ನ ಸರ್ವೋಚ್ಛ ನಾಯಕ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇರಾನ್ 2015ರಲ್ಲಿ ಜಗತ್ತಿನ ಪ್ರಬಲ ದೇಶಗಳೊಡನೆ ಮಾಡಿಕೊಂಡಿದ್ದ ಪರಮಾಣು ಒಪ್ಪಂದದಿಂದ ಅಮೆರಿಕ ಕಳೆದ ವರ್ಷ ಹಿಂದೆ ಸರಿದಿರುವುದನ್ನು ಸ್ಮರಿಸಬಹುದಾಗಿದೆ. ಅದರ ಬೆನ್ನಲ್ಲೇ ಅಮೆರಿಕವು ಇರಾನ್ ವಿರುದ್ಧ ಹಲವು ಸುತ್ತಿನ ಆರ್ಥಿಕ ದಿಗ್ಬಂಧನಗಳನ್ನು ಹೇರಿರುವುದನ್ನು ಸ್ಮರಿಸಬಹುದಾಗಿದೆ. ಇತ್ತೀಚೆಗೆ ಇರಾನ್ ಹೊಸ ಪರಮಾಣು ಒಪ್ಪಂದ ಮಾಡಿಕೊಳ್ಳುವಂತೆ ಅದರ ಮೇಲೆ ಇನ್ನಷ್ಟು ಒತ್ತಡವನ್ನು ಹೇರುವುದಕ್ಕಾಗಿ ಆ ದೇಶದ ತೈಲ ರಫ್ತನ್ನು ಶೂನ್ಯಕ್ಕೆ ಇಳಿಸುವ ಆರ್ಥಿಕ ದಿಗ್ಬಂಧನಗಳನ್ನು ಜಾರಿಗೆ ತಂದಿದೆ.

ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಸಹಿ ಹಾಕಿದ ಒಪ್ಪಂದದ ಬಗ್ಗೆ ಟ್ರಂಪ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತೃಪ್ತಿ ವ್ಯಕ್ತಪಡಿಸುತ್ತಿರುವುದನ್ನು ಸ್ಮರಿಸಬಹುದಾಗಿದೆ. ಇರಾನ್‌ನ ಕ್ಷಿಪಣಿ ಕಾರ್ಯಕ್ರಮ ಮತ್ತು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳಲ್ಲಿ ಇರಾನ್‌ನ ಪಾತ್ರದ ಉಲ್ಲೇಖಗಳ ಉಲ್ಲೇಖವಿಲ್ಲದಿರುವುದರಿಂದ 2015ರ ಪರಮಾಣು ಒಪ್ಪಂದ ದೋಷಪೂರಿತ ಎಂಬುದಾಗಿ ಟ್ರಂಪ್ ಬಣ್ಣಿಸಿದ್ದಾರೆ.

‘‘ಅಮೆರಿಕದೊಂದಿಗೆ ನಾವು ಸಂಧಾನ ಮಾಡುವುದಿಲ್ಲ ಎಂಬುದನ್ನು ನಾವು ಈಗಾಗಲೇ ಹೇಳಿದ್ದೇವೆ. ಯಾಕೆಂದರೆ, ಈ ಸಂಧಾನದಲ್ಲಿ ಯಾವುದೇ ಲಾಭವಿಲ್ಲ ಹಾಗೂ ಹಾನಿ ಮಾತ್ರ ತುಂಬಿದೆ’’ ಎಂಬುದಾಗಿ ಖಾಮಿನೈ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದ್ದಾರೆ ಎಂಬುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News