×
Ad

ಸ್ನೋಡನ್‌ಗೆ ಆಶ್ರಯ ನೀಡಿದ್ದ ಕುಟುಂಬಕ್ಕೆ ಆಶ್ರಯಕ್ಕಾಗಿ ಕೆನಡಕ್ಕೆ ಮನವಿ

Update: 2019-05-30 23:42 IST

ಹಾಂಕಾಂಗ್, ಮೇ 30: ಅಮೆರಿಕದ ನ್ಯಾಶನಲ್ ಸೆಕ್ಯುರಿಟಿ ಏಜನ್ಸಿ (ಎನ್‌ಎಸ್‌ಎ)ಯ ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡನ್‌ಗೆ ಆಶ್ರಯ ನೀಡಿದ್ದ ಕುಟುಂಬಕ್ಕೆ ಆಶ್ರಯ ನೀಡುವಂತೆ ಆ ಕುಟುಂಬದ ವಕೀಲರು ಕೆನಡಕ್ಕೆ ಬುಧವಾರ ಮನವಿ ಮಾಡಿದ್ದಾರೆ.

ಈ ಕುಟುಂಬದ ಸದಸ್ಯರನ್ನು ಹಾಂಗ್‌ಕಾಂಗ್‌ನಲ್ಲಿ ಹಿಂಸಿಸಲಾಗುತ್ತಿದೆ ಎಂದು ವಕೀಲರು ಹೇಳಿದ್ದಾರೆ.

ಮಾನವೀಯ ನೆಲೆಯಲ್ಲಿ ಈ ಕುಟುಂಬ ಸದಸ್ಯರಿಗೆ ಆಶ್ರಯ ನೀಡುವಂತೆ ಸರಕಾರೇತರ ಸಂಘಟನೆ ‘ಫಾರ್ ದ ರೆಫ್ಯೂಜೀಸ್’ಗೆ ಸೇರಿದ ಗ್ವಿಲಾಮ್ ಕ್ಲಿಕ್ ರಿವಾರ್ಡ್ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.

ಬ್ರಿಟಿಶರ ಮಾಜಿ ವಸಾಹತಾಗಿದ್ದ ಹಾಂಕಾಂಗನ್ನು ಚೀನಾವು 1997ರಲ್ಲಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಅಲ್ಲಿ ನಡೆಯುತ್ತಿದೆಯೆನ್ನಲಾದ ಮಾನವಹಕ್ಕುಗಳ ಉಲ್ಲಂಘನೆಗಳ ಕುರಿತ ಕಳವಳಗಳನ್ನು ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಶ್ರೀಲಂಕಾ ಮೂಲದ ಸುಪುನ್ ಕೆಲ್ಲಪತ ಮತ್ತು ನದೀಕಾ ಪತ್ತಿನಿ ಹಾಗೂ ಅವರ ಇಬ್ಬರು ಎಳೆಯ ಮಕ್ಕಳು ಅಮೆರಿಕಕ್ಕೆ ಗಡಿಪಾರಾಗುವ ಸಾಧ್ಯತೆಯನ್ನು ಎದುರಿಸುತ್ತಿದ್ದಾರೆ. ಅವರ ಆರಂಭಿಕ ನಿರಾಶ್ರಿತ ಕೋರಿಕೆಯನ್ನು ಹಾಂಕಾಂಗ್ ತಿರಸ್ಕರಿಸಿದೆ.

ಸ್ನೋಡನ್ 2013ರಲ್ಲಿ ಎನ್‌ಎಸ್‌ಎಯ ಅತಿ ರಹಸ್ಯ ದಾಖಲೆಗಳಿಗೆ ಕನ್ನ ಹಾಕಿದ ಬಳಿಕ ಈ ಕುಟುಂಬವು ಅವರನ್ನು ಹಾಂಕಾಂಗ್‌ನ ತಮ್ಮ ಸಣ್ಣ ಅಪಾರ್ಟ್‌ಮೆಂಟ್ ಒಂದರಲ್ಲಿ ಅಡಗಿಸಿಟ್ಟಿತ್ತು.

ಸ್ನೋಡನ್ ವಿರುದ್ಧ ಅಮೆರಿಕವು ಬೇಹುಗಾರಿಕೆ ಮತ್ತು ಸರಕಾರಿ ರಹಸ್ಯಗಳನ್ನು ಕದ್ದ ಆರೋಪವನ್ನು ಹೊರಿಸಿದೆ. ಅವರು ಈಗ ರಶ್ಯದಲ್ಲಿ ವಾಸಿಸುತ್ತಿದ್ದಾರೆ.

ಅಮೆರಿಕವು ಜಗತ್ತಿನ ದೇಶಗಳ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎನ್ನುವುದನ್ನು ತೋರಿಸುವ ದಾಖಲೆಗಳನ್ನು ಸ್ನೋಡನ್ ಬಹಿರಂಗಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News