×
Ad

ನೂತನ ಸರಕಾರದ ಮೊದಲ ನೂರು ದಿನಗಳಲ್ಲಿ ಮಹತ್ತರ ಸುಧಾರಣೆಗಳು: ನೀತಿ ಆಯೋಗ

Update: 2019-05-31 22:39 IST

ಹೊಸದಿಲ್ಲಿ, ಮೇ.31: ನರೇಂದ್ರ ಮೋದಿ ಸರಕಾರದ ಎರಡನೇ ಅವಧಿಯ ಮೊದಲ ನೂರು ದಿನಗಳಲ್ಲಿ ಮಹತ್ವಪೂರ್ಣ ಆರ್ಥಿಕ ಸುಧಾರಣೆಗಳು ನಡೆಯಲಿವೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ರಾಯ್ಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ, ವಿದೇಶಿ ಹೂಡಿಕೆದಾರರು ಸಂತುಷ್ಟರಾಗಲು ಕಾರಣ ಒದಗಿಬರಲಿದೆ ಎಂದು ಕುಮಾರ್ ತಿಳಿಸಿದ್ದಾರೆ. ಕಾರ್ಮಿಕ ಕಾನೂನಿನ ಬದಲಾವಣೆ, ಹೊಸ ಕೈಗಾರಿಕ ಅಭಿವೃದ್ಧಿಗಾಗಿ ಜಮೀನು ಬ್ಯಾಂಕ್‌ಗಳ ರಚನೆ ಮತ್ತು ಖಾಸಗೀಕರಣ ಇತ್ಯಾದಿಗಳು ಕೆಲವೊಂದು ಸುಧಾರಣಾ ಕ್ರಮಗಳಾಗಿರಲಿವೆ ಎಂದು ಕುಮಾರ್ ಸುಳಿವು ನೀಡಿದ್ದಾರೆ. ಸಂಸತ್‌ನ ಮುಂಗಾರಿನ ಅಧಿವೇಶನದಲ್ಲಿ ಸರಕಾರ ಸದ್ಯ ಇರುವ ಕಾರ್ಮಿಕ ನೀತಿಯನ್ನು ಸುಧಾರಿಸಲು ಮಸೂದೆ ಜಾರಿಗೆ ತರಲಿದೆ ಎಂದು ನೀತಿ ಆಯೋಗದ ಅಧಿಕಾರಿ ತಿಳಿಸಿದ್ದಾರೆ.

ಈ ಹೊಸ ಮಸೂದೆಯು ಕೇಂದ್ರ ಸರಕಾರದ 44 ಕಾನೂನುಗಳನ್ನು -ವೇತನ, ಕೈಗಾರಿಕ ಸಂಬಂಧ, ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿ ಹೀಗೆ ನಾಲ್ಕು ಸೂಚಿಗಳಾಗಿ ಒಟ್ಟುಗೂಡಿಸಲಿದೆ ಎಂದು ತಿಳಿಸಿದ್ದಾರೆ. ವಿದೇಶಿ ಹೂಡಿಕೆದಾರರಿಗೂ ಕೇಂದ್ರ ಜಮೀನು ನೀಡಲಿದೆ. ಇವುಗಳನ್ನು ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ನಿಯಂತ್ರಣ ಹೊಂದಿರುವ ಉಪಯೋಗಿಸಲ್ಪಡದ ಜಮೀನುಗಳಿಂದ ರಚಿಸಲ್ಪಟ್ಟ ಜಮೀನು ಬ್ಯಾಂಕ್‌ಗಳಿಂದ ನೀಡಲಾಗುವುದು.

ಮುಂದಿನ ಕೆಲವು ತಿಂಗಳಲ್ಲಿ ಮೋದಿ ಸರಕಾರ 42 ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದು ಅಥವಾ ಮುಚ್ಚುವುದು ಎಂದು ಕುಮಾರ್ ತಿಳಿಸಿದ್ದಾರೆ. ಎಲ್ಲ ಸರಕಾರಿ ಸ್ವಾಮ್ಯದ ಕಂಪೆನಿಗಳನ್ನು ನಿಯಂತ್ರಿಸಲು ಒಂದು ಸ್ವಾಯತ್ತ ಕಂಪೆನಿಯನ್ನು ರಚಿಸುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News