ನವ ಭಾರತ ನಿರ್ಮಾಣಕ್ಕಾಗಿ ಮೋದಿ ಅವರಿಗೆ ನಿರ್ಣಾಯಕ ಜನಾದೇಶ: ರಾಷ್ಟ್ರಪತಿ ರಾಮನಾಥ್ ಕೋವಿಂದ್

Update: 2019-05-31 17:13 GMT

ಹೊಸದಿಲ್ಲಿ,ಮೇ 31: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊರಕಿರುವ ನಿರ್ಣಾಯಕ ಜನಾದೇಶವು ಎಲ್ಲರ ಪ್ರಗತಿಯನ್ನು ಒಳಗೊಂಡಿರುವ ಮತ್ತು ದೇಶವು ಜಾಗತಿಕ ಬೆಳವಣಿಗೆಯ ನೇತಾರನಾಗಿ ಪರಿವರ್ತನೆಗೊಳ್ಳುವ ನವ ಭಾರತದ ನಿರ್ಮಾಣಕ್ಕಾಗಿ ಜನತೆಯ ಕರೆಯಾಗಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಹೇಳಿದ್ದಾರೆ.

ಗುರುವಾರ ರಾಷ್ಟ್ರಪತಿ ಭವನದಲ್ಲಿ ಮೋದಿ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿದೇಶಿ ಸರಕಾರಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳಿಗಾಗಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಮಾತನಾಡುತ್ತಿದ್ದ ರಾಷ್ಟ್ರಪತಿಗಳು, ಜನತೆಯ ತೀರ್ಪು ಸದ್ಯೋಭವಿಷ್ಯದಲ್ಲಿ ನವ ಭಾರತವನ್ನು ನಿರ್ಮಿಸಲು ಮೋದಿಯವರ ದೂರದರ್ಶಿತ್ವದ ನಾಯಕತ್ವವನ್ನು ದೃಢೀಕರಿಸುತ್ತದೆ ಎಂದರು. ಈ ಜನಾದೇಶವು ಎಲ್ಲರೂ ಪ್ರಗತಿ ಹೊಂದುವ ಮತ್ತು ಯಾರೂ ಹಿಂದುಳಿಯದಿರುವ,ಮುಂಬರುವ ದಶಕದಲ್ಲಿ ಕಡುಬಡತನವನ್ನು ನಿವಾರಿಸುವ ಹಾದಿಯಲ್ಲಿರುವ,ಪ್ರತಿ ಹೆಣ್ಣುಮಗುವಿನ ಸಾಮರ್ಥ್ಯವನ್ನು ಸಾಕಾರಗೊಳಿಸುವ, ಆಧುನಿಕ ತಂತ್ರಜ್ಞಾನ ಮತ್ತು ಮಿತಿಯಿಲ್ಲದ ತನ್ನ ಯುವಜನತೆಯ ಲಾಭವನ್ನು ಪಡೆದುಕೊಳ್ಳಲು ಶ್ರಮಿಸುವ ನವಭಾರತ ನಿರ್ಮಾಣಕ್ಕಾಗಿ ಆಹ್ವಾನವಾಗಿದೆ ಎಂದರು.

ಜನತೆಯ ನಿರೀಕ್ಷೆಗಳು ಉತ್ತುಂಗದಲ್ಲಿವೆ ಎಂದ ರಾಷ್ಟ್ರಪತಿಗಳು,ಅವರು ತಮಗಾಗಿ ಮತ್ತು ತಮ್ಮ ಮಕ್ಕಳಿಗೆ ಉತ್ತಮ ಬದುಕಿಗಾಗಿ ನಿರಂತರವಾಗಿ ಹಂಬಲಿಸುತ್ತಿದ್ದಾರೆ. ಉತ್ತಮ ಆಡಳಿತ,ಸಮಾನ ಅವಕಾಶಗಳು ಹಾಗೂ ಸಾರ್ವಜನಿಕ ಬಳಕೆಯ ವಸ್ತುಗಳು ಮತ್ತು ಸೇವೆಗಳ ದಕ್ಷ ಮತ್ತು ನ್ಯಾಯಸಮ್ಮತ ವಿತರಣೆಗಾಗಿ ಅವರ ಬೇಡಿಕೆಯಲ್ಲಿ ಯಾವುದೇ ಸಡಿಲಿಕೆಯಿಲ್ಲ ಎಂದರು.

ಮೋದಿಯವರು ಈ ನಿರೀಕ್ಷೆಗಳನ್ನು ಈಡೇರಿಸಲು ಹಾಗೂ ನಮ್ಮ ಪ್ರಜೆಗಳಿಗೆ ಘನತೆ ಮತ್ತು ಗೌರವದ ಬದುಕನ್ನು ಸಾಧ್ಯವಾಗಿಸಲು ನಿಸ್ವಾರ್ಥದಿಂದ ಮತ್ತು ಅವಿಶ್ರಾಂತವಾಗಿ ಶ್ರಮಿಸುವ ಸರಕಾರವನ್ನು ಮುನ್ನಡೆಸುತ್ತಾರೆ ಎಂದರು.

ಬಾಂಗ್ಲಾದೇಶದ ಅಧ್ಯಕ್ಷ ಮುಹಮ್ಮದ್ ಅಬ್ದುಲ್ ಹಾಮಿದ್,ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ,ಕಿರ್ಗಿಝ್ ಗಣರಾಜ್ಯದ ಅಧ್ಯಕ್ಷ ಸೂರೋಂಬೈ ಝೀಂಬೆಕೊವ್,ಮ್ಯಾನ್ಮಾರ್ ಅಧ್ಯಕ್ಷ ಯು ವಿನ್ ಮಿಂಟ್,ಮಾರಿಷಿಯಸ್ ಪ್ರಧಾನಿ ಪ್ರವಿಂದ ಕುಮಾರ ಜಗನ್ನಾಥ್,ನೇಪಾಳದ ಪ್ರಧಾನಿ ಕೆ.ಪಿ.ಒಲಿ,ಭೂತಾನದ ಪ್ರಧಾನಿ ಲೋತೆ ಶೆರಿಂಗ್ ಮತ್ತು ಥೈಲಂಡ್ ಪ್ರಧಾನಿಯ ವಿಶೇಷ ಪ್ರತಿನಿಧಿ ಗ್ರಿಸಡಾ ಬೂನರ್ಯಾಚ್ ಅವರು ಭೋಜನ ಕೂಟದಲ್ಲಿ ಭಾಗಿಯಾಗಿದ್ದರು.

ದಾಲ್ ರೈಸಿನಾ ಸವಿದ ಅತಿಥಿಗಳು

ರಾಷ್ಟ್ರಪತಿ ಭವನದ ಪಾಕಶಾಲೆಯ ವಿಶೇಷ ಖಾದ್ಯ ‘ದಾಲ್ ರೈಸಿನಾ’ವನ್ನು ಗಣ್ಯರಿಗೆ ಉಣಬಡಿಸಲಾಗಿತ್ತು. ದಾಲ್ ರೈಸಿನಾದ ತಯಾರಿಕೆಗಾಗಿ 48 ಗಂಟೆಗಳು ಬೇಕಾಗುತ್ತವೆ ಮತ್ತು ಅದಕ್ಕಾಗಿ ಅಗತ್ಯ ಮುಖ್ಯ ಸಾಮಗ್ರಿಗಳನ್ನು ಲಕ್ನೋದಿಂದ ತರಿಸಲಾಗುತ್ತದೆ. ಗಣ್ಯರಿಗಾಗಿ ದಾಲ್ ರೈಸಿನಾದ ತಯಾರಿಕೆ ಮಂಗಳವಾರವೇ ಆರಂಭಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News