BIG NEWS: 370ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ತಾಳೆಯಾಗದ ಇವಿಎಂ ಮತ ಎಣಿಕೆ; ವಿವರಣೆ ನೀಡದ ಚು. ಆಯೋಗ!

Update: 2019-06-01 15:10 GMT

#ಮೊದಲ 4 ಹಂತಗಳಲ್ಲಿ ಮತದಾನ ನಡೆದ ಕ್ಷೇತ್ರಗಳಲ್ಲೇ ಇಷ್ಟು ಲೋಪ

#ಇದೊಂದು ಗಂಭೀರ ವಿಷಯ: ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್

#ಇವಿಎಂ ದಕ್ಷತೆ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ಗಂಭೀರ ಪ್ರಶ್ನೆಗಳು 

#ಇದು thequint.comನ ವಿಶೇಷ ತನಿಖಾ ವರದಿ

ಇತ್ತೀಚೆಗಷ್ಟೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಎನ್ ಡಿಎ ಮೈತ್ರಿಕೂಟ ಭರ್ಜರಿ ಬಹುಮತ ಪಡೆದಿದೆ. ಆರಂಭದಿಂದಲೂ ಇವಿಎಂ ಬಗ್ಗೆ ದೇಶಾದ್ಯಂತ ಅಪಸ್ವರ ಕೇಳಿಬರುತ್ತಿದ್ದು, ಇದೀಗ thequint.comನ ವಿಶೇಷ ವರದಿಯೊಂದು ದೇಶಾದ್ಯಂತ 370ಕ್ಕೂ ಹೆಚ್ಚು ಸೀಟುಗಳಲ್ಲಿ ಇವಿಎಂಗಳಲ್ಲಿ ಚಲಾವಣೆಯಾದ ಮತಗಳು ಮತ್ತು ಎಣಿಕೆಯಾದ ಮತಗಳು ತಾಳೆಯಾಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದೆ. ಈ ವರದಿಯ ಸಂಪೂರ್ಣ ಸಾರಾಂಶ ಈ ಕೆಳಗಿದೆ.

................................................................

ನೀವು ಈ ವರದಿಯಲ್ಲಿ ಓದಬಹುದಾದ ಅಂಕಿ ಅಂಶಗಳ ತರ್ಕ ಮತ್ತು ಲೆಕ್ಕಾಚಾರಗಳಲ್ಲಿ ವಿರೋಧಾಭಾಸಗಳಿವೆ. ಇವಿಎಂಗಳಲ್ಲಿ ಚಲಾವಣೆಯಾದ ಮತಗಳು ಮತ್ತು ಇವಿಎಂಗಳಲ್ಲಿ ಲೆಕ್ಕ ಹಾಕಲ್ಪಟ್ಟ ಮತಗಳ ಬಗ್ಗೆ ಚುನಾವಣಾ ಆಯೋಗವು ಪ್ರಕಟಿಸಿದ್ದ ಎರಡು ಸೆಟ್ ಗಳ ಅಂಕಿ ಅಂಶಗಳನ್ನು The Quint ಸಂಪೂರ್ಣವಾಗಿ ಪರಿಶೀಲಿಸಿದೆ. ಮೊದಲ ನಾಲ್ಕು ಹಂತಗಳಲ್ಲಿ ಮತದಾನ ನಡೆದ 373 ಕ್ಷೇತ್ರಗಳ ಎರಡು ಸೆಟ್ ಗಳಲ್ಲಿ ನಮಗೆ ಗಂಭೀರ ವ್ಯತ್ಯಾಸಗಳು ಕಂಡು ಬಂದಿವೆ.

► ತಮಿಳುನಾಡಿನ ಕಾಂಚಿಪುರಂ ಲೋಕಸಭಾ ಕ್ಷೇತ್ರದಲ್ಲಿ 12,14,086 ಇವಿಎಂ ಮತಗಳು ಚಲಾವಣೆಯಾಗಿವೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ತಿಳಿಸುತ್ತವೆ. ಆದರೆ 12,32,417 ಇವಿಎಂ ಮತಗಳು ಎಣಿಕೆಗೆ ಸಿಕ್ಕಿವೆ. ಇದರ ಅರ್ಥ ಸುಮಾರು 18,331 ಮತಗಳು ಈ ಕ್ಷೇತ್ರದಲ್ಲಿ ಹೆಚ್ಚುವರಿ ಮತಗಳು!. ಯಾಕೆ? ಚುನಾವಣಾ ಆಯೋಗದಿಂದ ಯಾವುದೇ ಉತ್ತರವಿಲ್ಲ.

► ತಮಿಳುನಾಡಿನ ಧರ್ಮಪುರಿ ಲೋಕಸಭಾ ಕ್ಷೇತ್ರದಲ್ಲಿ 11,94,440 ಇವಿಎಂ ಮತಗಳು ಚಲಾವಣೆಯಾಗಿವೆ ಎಂದು ಚುನಾವಣಾ ಆಯೋಗ ಹೇಳುತ್ತದೆ. ಆದರೆ 12,12,311 ಮತಗಳನ್ನು ಲೆಕ್ಕ ಹಾಕಲಾಗಿದೆ. ಇಲ್ಲಿ ಸುಮಾರು 17,871 ಹೆಚ್ಚುವರಿ ಮತಗಳು ಲಭಿಸಿವೆ. ಈ ಮತಗಳು ಎಲ್ಲಿಂದ ಬಂದವು?. ಚು.ಆಯೋಗದಿಂದ ಯಾವುದೇ ಉತ್ತರವಿಲ್ಲ.

► ತಮಿಳುನಾಡಿನ ಶ್ರೀಪೆರುಂಬದೂರಿನಲ್ಲಿ 13,88,666 ಮತಗಳು ಚಲಾವಣೆಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸುತ್ತದೆ. ಆದರೆ ಇಲ್ಲಿ 14,03,178 ಮತಗಳನ್ನು ಲೆಕ್ಕ ಹಾಕಲಾಗಿದೆ. ಹಾಗಾಗಿ 14,512 ಹೆಚ್ಚುವರಿ ಮತಗಳು ಇಲ್ಲಿ ಲಭಿಸಿವೆ. ಯಾಕೆ? ಚುನಾವಣಾ ಆಯೋಗದಿಂದ ಯಾವುದೇ ಉತ್ತರವಿಲ್ಲ.

►ಉತ್ತರ ಪ್ರದೇಶದ ಮಥುರಾದಲ್ಲಿ 10,88,206 ಮತಗಳು ಚಲಾವಣೆಯಾಗಿರುವುದಾಗಿ ಚು.ಆಯೋಗದ ಅಂಕಿ ಅಂಶಗಳು ತಿಳಿಸುತ್ತವೆ. ಆದರೆ ಇಲ್ಲಿ 10,98,112 ಮತಗಳು ಎಣಿಕೆಗೆ ಸಿಕ್ಕಿವೆ. ಹೆಚ್ಚುವರಿ 9,906 ಮತಗಳು ಎಲ್ಲಿಂದ ಬಂದವು?. ಚು.ಆಯೋಗದಿಂದ ಉತ್ತರವಿಲ್ಲ.

ಇವು ದೇಶದಲ್ಲಿ ಅತೀ ಹೆಚ್ಚು ಹೆಚ್ಚುವರಿ ಮತಗಳನ್ನು ಪಡೆದ ಉದಾಹರಣೆಗಳು. ನಾಲ್ಕು ಹಂತಗಳಲ್ಲಿ ಮತದಾನ ನಡೆದ 373 ಕ್ಷೇತ್ರಗಳಲ್ಲಿ 220 ಕ್ಷೇತ್ರಗಳಲ್ಲಿ ಹೆಚ್ಚುವರಿ ಮತಗಳು ಲಭಿಸಿವೆ. ಉಳಿದವುಗಳಲ್ಲಿ ಮತ ಕೊರತೆಗಳ ಬಗ್ಗೆ ಅಂಕಿ ಅಂಶಗಳಿವೆ.

Quint ಪ್ರತಿಕ್ರಿಯೆ ಕೋರಿದ ನಂತರ ಚಲಾವಣೆಯಾದ ಮತಗಳ ಮಾಹಿತಿ ತೆಗೆದು ಹಾಕಿದ ಚು.ಆಯೋಗ

ಮೊದಲ ನಾಲ್ಕು ಹಂತಗಳ ಮತದಾನದ ಮಾಹಿತಿಯನ್ನು ಮಾತ್ರ ‘ಕ್ವಿಂಟ್’ ಕಲೆ ಹಾಕಿದೆ. ಚು.ಆಯೋಗದ ವೆಬ್ ಸೈಟ್ ‘ಅಂದಾಜು ಅಂಕಿಅಂಶ’ ಎಂದು ನಮೂದಿಸಿದ್ದರಿಂದ 5,6 ಮತ್ತು 7ನೆ ಹಂತಗಳ ಬಗ್ಗೆ ಪರಿಶೀಲನೆ ನಡೆಸಿಲ್ಲ.

373 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳಲ್ಲಿರುವ ವ್ಯತ್ಯಾಸಗಳ ಬಗ್ಗೆ ‘ಕ್ವಿಂಟ್’ ಮೇ 27ರಂದು ಚು.ಆಯೋಗಕ್ಕೆ ಇ ಮೇಲ್ ಕಳುಹಿಸಿ ಈ ಬಗ್ಗೆ ಪ್ರಶ್ನಿಸಿತ್ತು. ತಕ್ಷಣ ಈ ಬಗ್ಗೆ ಪ್ರತಿಕ್ರಿಯೆ ಕಳುಹಿಸುತ್ತೇವೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ‘ಕ್ವಿಂಟ್’ ಅನ್ನು ಸಂಪರ್ಕಿಸಿದ್ದರು. ಅದೇ ದಿನ ಮಧ್ಯಾಹ್ನದ ನಂತರ ‘ಅಂತಿಮ ಒಟ್ಟು ಮತದಾನದ ವಿವರ’ ಎನ್ನುವ ಟಿಕರ್ ನಿಗೂಢವಾಗಿ ಚು.ಆಯೋಗದ ವೆಬ್ ಸೈಟ್(eciresults.nic.in.) ನಿಂದ ಮಾಯವಾಗಿತ್ತು.

ವೆಬ್ ಸೈಟ್ ನಿಂದ ಟಿಕ್ಕರ್ ಮತ್ತು ಅಂಕಿಅಂಶಗಳು ಮಾಯವಾಗಿದ್ದೇಕೆ ಎಂದ ಚು.ಆಯೋಗದ ಬಳಿ ನಾವು ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಲಭಿಸಲಿಲ್ಲ. ಅಂದು ಸಂಜೆ ವೇಳೆ ಚು.ಆಯೋಗದಿಂದ ಇ ಮೇಲ್ ಬಂದಿದ್ದು, ಒಂದು ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳ ಬಗ್ಗೆ ಮಾತ್ರ ಸ್ಪಷ್ಟನೆ ನೀಡಲಾಗಿತ್ತು. ಇದು ಅಂತಿಮ ಅಂಕಿ ಅಂಶವಲ್ಲ, ಬದಲಾವಣೆಯಾಗಲಿದೆ ಎಂದೂ ಚು.ಆಯೋಗ ತಿಳಿಸಿತು.

ಇತರ ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳು ಮತ್ತು ಎಣಿಕೆಗೆ ಸಿಕ್ಕ ಹೆಚ್ಚುವರಿ ಮತಗಳ ಬಗ್ಗೆ ಉತ್ತರ ನೀಡುವಂತೆ ನಾವು ಮತ್ತೊಮ್ಮೆ ಚು.ಆಯೋಗಕ್ಕೆ ಪತ್ರ ಬರೆದೆವು. ಚು.ಆಯೋಗದ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಲಾದ 1ರಿಂದ 4 ಹಂತಗಳ ದಾಖಲೆಗಳನ್ನು ಇಮೇಲ್ ನಲ್ಲಿ ಲಗತ್ತಿಸಲಾಗಿತ್ತು. ಆದರೆ ಇನ್ನೂ ಚು.ಆಯೋಗ ಪ್ರತಿಕ್ರಿಯೆ ನೀಡಿಲ್ಲ.

ಇಂತಹ ಗಂಭೀರ ವಿಚಾರದ ಬಗ್ಗೆ ಉತ್ತರಕ್ಕಾಗಿ ನಾವು ಹಿರಿಯ ಚುನಾವಣಾ ಅಧಿಕಾರಿಗಳನ್ನು ಭೇಟಿಯಾಗಲು ಪ್ರಯತ್ನಿಸಿದೆವು. ಆದರೆ ಯಾರೊಬ್ಬರೂ ನಮ್ಮನ್ನು ಭೇಟಿಯಾಗಲು ಒಪ್ಪಿಲ್ಲ.

ಮತ ಎಣಿಕೆ ಮುಗಿದು 4 ದಿನಗಳು ಕಳೆದರೂ (ಮೇ 27) ಚುನಾವಣಾ ಆಯೋಗವು ಚಲಾವಣೆಯಾದ ಮತಗಳನ್ನು ಲೆಕ್ಕ ಹಾಕಲಾಗುತ್ತಿದೆ ಎಂದು ಚು.ಆಯೋಗವು ಕ್ವಿಂಟ್ ಗೆ ನೀಡಿದ ಉತ್ತರವು ಆಶ್ಚರ್ಯ ತರಿಸುತ್ತಿದೆ. ಚಲಾವಣೆಯಾದ ಮತಗಳ ಅಂಕಿಅಂಶಗಳನ್ನು ಲೆಕ್ಕ ಹಾಕಲು ಚು.ಆಯೋಗವು ಅಷ್ಟೊಂದು ಸಮಯವನ್ನು ಯಾಕಾಗಿ ತೆಗೆದುಕೊಳ್ಳುತ್ತಿದೆ?

ನಿಯಮಗಳ ಪ್ರಕಾರ ಪ್ರತಿ 2 ಗಂಟೆಗಳಿಗೊಮ್ಮೆ ಚಲಾವಣೆಯಾದ ಮತಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಸಂಬಂಧಪಟ್ಟ ಅಧಿಕಾರಿಯ ಕರ್ತವ್ಯವಾಗಿದೆ. ಆದ್ದರಿಂದ ಚಲಾವಣೆಯಾದ ಮತಗಳ ಬಗ್ಗೆ ಮಾಹಿತಿ ಅಪ್ಲೋಡ್ ಮಾಡಲು ಹೆಚ್ಚು ದಿನಗಳನ್ನು ತೆಗೆದುಕೊಳ್ಳಲೇಬಾರದು.

ಈ ಬಗ್ಗೆ ಕ್ವಿಂಟ್ ಮಾಜಿ ಮುಖ್ಯ ಚುನಾವಣಾ ಆಯುಕ್ತ ಒಪಿ ರಾವತ್ ಜೊತೆ ಮಾತನಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಮೇಲ್ನೋಟಕ್ಕೆ ನೋಡುವಾಗ ಇದು ಗಂಭೀರ ವಿಚಾರವಾಗಿ ತೋರುತ್ತಿದೆ. ಚುನಾವಣಾ ಮುಖ್ಯ ಆಯುಕ್ತನಾಗಿ ನನ್ನ ಅವಧಿಯಲ್ಲಿ ಈ ಹಿಂದೆ ಹೀಗೆ (ಚಲಾವಣೆಯಾದ ಮತಗಳು, ಎಣಿಕೆಯಾದ ಮತಗಳೊಂದಿಗೆ ತಾಳೆಯಾಗದ್ದು ) ಎಂದಿಗೂ ನಡೆದ ಬಗ್ಗೆ ನನಗೆ ತಿಳಿದಿಲ್ಲ” ಎಂದಿದ್ದಾರೆ.

ಹೆಚ್ಚುವರಿ ಮತಗಳು ಲಭಿಸಿದ ಟಾಪ್ ಕ್ಷೇತ್ರಗಳ ಬಗ್ಗೆ ನಾವು ಈ ಕೆಳಗೆ ಪಟ್ಟಿ ನೀಡಿದ್ದೇವೆ. ತಮಿಳುನಾಡು, ಬಿಹಾರ, ಉತ್ತರ ಪ್ರದೇಶ ಮತ್ತು ಅರುಣಾಚಲ ಪ್ರದೇಶಗಳು ಈ ರಾಜ್ಯಗಳಾಗಿವೆ.

ಹೆಚ್ಚುವರಿ ಮತಗಳು ಲಭಿಸಿದ ಕ್ಷೇತ್ರಗಳು

ತಮಿಳುನಾಡು

ಕಾಂಚೀಪುರಂನಲ್ಲಿ ಎಐಎಡಿಎಂಕೆಯ ಅಭ್ಯರ್ಥಿ ಕೆ. ಮರಗದಂ ಡಿಎಂಕೆ ಅಭ್ಯರ್ಥಿ ಸೆಲ್ವಂ ವಿರುದ್ಧ ಸೋಲನುಭವಿಸಿದ್ದರು. ಚಲಾವಣೆಯಾದ ಮತಗಳು ಮತ್ತು ಎಣಿಕೆಯಾದ ಮತಗಳಲ್ಲಿ ವ್ಯತ್ಯಾಸಗಳಿರುವ ಬಗ್ಗೆ ತಮಗೆ ತಿಳಿದಿತ್ತು ಎಂದು ಮರಗದಂ ಅವರ ಕಚೇರಿಯು ಕ್ವಿಂಟ್ ಗೆ ತಿಳಿಸಿದೆ. ಇದೀಗ ಅವರು ಸೂಕ್ತ ದಾಖಲೆಗಳನ್ನು ಮುಂದಿಟ್ಟು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಚಲಾವಣೆಯಾದ ಮತಗಳೊಂದಿಗೆ ಎಣಿಕೆಯಾದ ಮತಗಳು ತಾಳೆಯಾಗದೆ ಇದ್ದಲ್ಲಿ ಮರುಮತದಾನಕ್ಕಾಗಿ ಬೇಡಿಕೆಯಿರಿಸಬಹುದು ಎಂದು ತಜ್ಞರು ಹೇಳುತ್ತಾರೆ. ಈ ಎರಡು ಸೆಟ್ ಗಳಲ್ಲಿ ಹೆಚ್ಚುವರಿ ಮತಗಳು ಜಯ ಗಳಿಸಿದ ಅಭ್ಯರ್ಥಿಯನ್ನು ಬಾಧಿಸದು. ಆದರೆ ಅದಕ್ಕಿಂತಲೂ ದೊಡ್ಡ ಪ್ರಶ್ನೆಗಳು ಇಲ್ಲಿ ಉಳಿದುಕೊಂಡಿವೆ.

►ಮೊದಲನೆಯದಾಗಿ ಚು.ಆಯೋಗವು ಚಲಾವಣೆಯಾದ ಮತಗಳ ಅಂಕಿ ಅಂಶಗಳನ್ನು ಚು.ಆಯೋಗವು ಅಂತಿಮ ಅಂಕಿಅಂಶಗಳು ಎಂದು ಅಪ್ಲೋಡ್ ಮಾಡಿದ್ದೇಕೆ?

►ಅದನ್ನು ನಂತರ ರಿಮೂವ್ ಮಾಡಿದ್ದೇಕೆ?

►ಈ ಗಂಭೀರ ವ್ಯತ್ಯಾಸಗಳ ಬಗ್ಗೆ ಚು.ಆಯೋಗ ಸುಮ್ಮನಿರುವುದೇಕೆ? ಈ ಬಗ್ಗೆ ಅಡಗಿಸಲು ಅವರಿಗೆ ಏನಾದರೂ ಇದೆಯೇ?

►ಈ ವ್ಯತ್ಯಾಸಗಳು ನೀಡುವ ಎಚ್ಚರಿಕೆಯೇನು? ಇವಿಎಂ ತಿರುಚಲ್ಪಡುತ್ತಿದೆ ಎಂದೇ?

ಉತ್ತರ ಪ್ರದೇಶ

ಮಥುರಾದಲ್ಲಿ ಬಿಜೆಪಿಯ ಹೇಮಾಮಾಲಿನಿ 6,67,342 ಮತಗಳನ್ನು ಗಳಿಸಿ ಇಲ್ಲಿ ಜಯಗಳಿಸಿದ್ದರು. ರಾಷ್ಟ್ರೀಯ ಲೋಕ ದಳದ ಕುಮಾರ್ ನರೇಂದ್ರ ಸಿಂಗ್ ಕೇವಲ 3,77,319 ಮತಗಳನ್ನು ಪಡೆಯಲು ಮಾತ್ರ ಶಕ್ತರಾಗಿದ್ದರು.

ಅರುಣಾಚಲ ಪ್ರದೇಶ

ಬಿಜೆಪಿಯ ಕಿರಣ್ ರಿಜಿಜು ಅರುಣಾಚಲ ಪ್ರದೇಶ ಕ್ಷೇತ್ರದಲ್ಲಿ 63.02% ಮತಗಳನ್ನು ಗಳಿಸುವ ಮೂಲಕ ಜಯ ಗಳಿಸಿದ್ದರೆ, ಕಾಂಗ್ರೆಸ್ ನ ನಬಾಮ್ ಟುಕಿ ಕೇವಲ 14.22 ಶೇ. ಮತ ಗಳಿಸಿದ್ದರು.

2018ರಲ್ಲಿ ಮಧ್ಯಪ್ರದೇಶ ಚುನಾವಣೆಯಲ್ಲೂ ಇಂತಹ ವ್ಯತ್ಯಾಸಗಳು ಕಂಡುಬಂದ ಬಗ್ಗೆ ಕ್ವಿಂಟ್ ವರದಿ ಮಾಡಿತ್ತು. 230 ವಿಧಾನಸಭಾ ಕ್ಷೇತ್ರಗಳಲ್ಲಿ 204 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳಿಗೂ ಎಣಿಕೆಗೆ ಸಿಕ್ಕ ಮತಗಳಿಗೂ ವ್ಯತ್ಯಾಸಗಳಿದ್ದವು.

ಒಂದು ಮತ ಕೂಡ ವ್ಯತ್ಯಾಸವಾಗಬಾರದು ಎಂದು ಇವಿಎಂ ತಜ್ಞರು ಹೇಳುತ್ತಾರೆ. ಒಂದು ವೇಳೆ ವ್ಯತ್ಯಾಸ ಕಂಡು ಬಂದಲ್ಲಿ ಎಣಿಕೆಗೆಂದು ನಿಯೋಜಿಸಲ್ಪಟ್ಟಿರುವ ಚುನಾವಣಾ ಅಧಿಕಾರಿ ಕೂಡಲೇ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಇದು ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಚು.ಆಯೋಗವು ಈ ಬಗ್ಗೆ ಶೀಘ್ರ ಸ್ಪಷ್ಟನೆ ನೀಡಬೇಕು. ಈ ಮೂಲಕ ಚುನಾವಣೆಯ ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಕಾಪಾಡಬೇಕು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಮೂವರು ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಎಸ್.ವೈ.ಖುರೇಷಿ, ಎನ್.ಗೋಪಾಲಸ್ವಾಮಿ ಮತ್ತು ಎಚ್.ಎಸ್.ಬ್ರಹ್ಮಾ ಅವರು ಚುನಾವಣಾ ಆಯೋಗವು ಈ ವ್ಯತ್ಯಾಸಗಳ ಬಗ್ಗೆ ವಿವರಿಸಬೇಕು ಎಂದು ಹೇಳಿದ್ದಾರೆ ಎಂದು ವರದಿಯಾದ ಹಿನ್ನೆಲೆಯಲ್ಲಿ ಇಂದು ಅತ್ಯಂತ ಗಂಭೀರ ವಿಚಾರವಾಗಿದೆ” ಎಂದು ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ ನ ಸದಸ್ಯ ಜಗದೀಪ್ ಚೋಕ್ಕರ್ ಹೇಳಿದ್ದಾರೆ.

“ಚಲಾವಣೆಯಾದ ಮತಗಳ ಸಂಖ್ಯೆ ಯಾವತ್ತೂ ಹೆಚ್ಚುತ್ತದೆ ಹೊರತು ಕಡಿಮೆಯಾಗುವುದಿಲ್ಲ” ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ರಾವತ್ ಹೇಳುತ್ತಾರೆ. ಮತದಾನದ ದಿನ ಕಲೆಹಾಕಲಾದ ಅಂಕಿಅಂಶಗಳ ಆಧಾರದಲ್ಲಿ ಚಲಾವಣೆಯಾದ ಅಂದಾಜು ಮತಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆದರೆ ಮತದಾನದ ದಿನದ ಕೊನೆಗೆ ಈ ಸಂಖ್ಯೆಯು ಹೆಚ್ಚುತ್ತದೆ.

ಈಗ ಚು.ಆಯೋಗವು ಈ ಬಗ್ಗೆ ಸ್ಪಷ್ಟನೆ ನೀಡುತ್ತದೆಯೇ?

ಒಂದು ವೇಳೆ ಸದ್ಯಕ್ಕಿರುವ ಚಲಾವಣೆಯಾದ ಮತಗಳ ಅಂಕಿಅಂಶಗಳು ಅಂತಿಮವಾಗಿರದೇ ಇದ್ದರೆ, ಅದಿನ್ನೂ ಹೆಚ್ಚಾಗುತ್ತದೆ ಎನ್ನುವುದಾದರೆ ಕೆಲ ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳಿಗಿಂತ ಎಣಿಕೆಗೆ ಸಿಕ್ಕ ಮತಗಳು ಕಡಿಮೆಯಾಗಿರುವುದು ಏಕೆ?

ಈ ಕೊರತೆಯ ಬಗ್ಗೆ ಚು.ಆಯೋಗವು ಸ್ಪಷ್ಟನೆ ನೀಡಬಹುದೇ? ಎಣಿಕೆ ಮುಗಿದ ಮೇಲೂ ಚಲಾವಣೆಯಾದ ಮತಗಳ ಬಗ್ಗೆ ಮಾಹಿತಿ ಅಪ್ಲೋಡ್ ಮಾಡಲು ತಡಮಾಡುತ್ತಿರುವ ಬಗ್ಗೆ ಚು.ಆಯೋಗ ವಿವರಣೆ ನೀಡಬಹುದೇ?, ನಿಯಮಗಳ ಪ್ರಕಾರ ಮತದಾನದ ಬೂತ್ ನಲ್ಲಿರುವ ಸಂಬಂಧಪಟ್ಟ ಅಧಿಕಾರಿ 2 ಗಂಟೆಗಳಿಗೊಮ್ಮೆ ಚಲಾವಣೆಯಾದ ಒಟ್ಟು ಮತಗಳ ಬಗ್ಗೆ ಚು.ಆಯೋಗಕ್ಕೆ ಮಾಹಿತಿ ನೀಡುತ್ತಿರಬೇಕು. ಹಾಗಾಗಿ ಚಲಾವಣೆಯಾದ ಮತಗಳ ಅಂತಿಮ ಅಂಕಿ ಅಂಶಕ್ಕಾಗಿ ತಿಂಗಳಿಗೂ ಹೆಚ್ಚು ಕಾಲ ಬೇಕಾಗಿರುವುದು ಯಾಕೆ?.

thequint.comನ ವಿಶೇಷ ತನಿಖಾ ವರದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News