ಗೃಹ ಸಚಿವಾಲಯದ ಹೆಸರನ್ನು ಕ್ಲೀನ್ ಚಿಟ್ ಸಚಿವಾಲಯ ಎಂದು ಬದಲಿಸಿ: ಪ್ರಿಯಾಂಕ್ ಖರ್ಗೆ
Update: 2019-06-01 20:02 IST
ಹೊಸದಿಲ್ಲಿ,ಜೂ.1: ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ವಿರುದ್ಧ ಶನಿವಾರ ಟೀಕಾ ಪ್ರಹಾರ ನಡೆಸಿದ ಕರ್ನಾಟಕದ ಸಮಾಜ ಕಲ್ಯಾಣ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು,ಗೃಹ ವ್ಯವಹಾರಗಳ ಸಚಿವಾಲಯವನ್ನು ‘ಕ್ಲೀನ್ ಚಿಟ್‌ಗಳನ್ನು ಒದಗಿಸುವ ಸಚಿವಾಲಯ’ ಎಂದು ಮರುನಾಮಕರಣಗೊಳಿಸಬೇಕು ಎಂದು ಕುಟುಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ಸದಸ್ಯರಾಗಿರುವ ಶಾ ಶುಕ್ರವಾರವಷ್ಟೇ ಗೃಹ ಸಚಿವಾಲಯದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
‘‘ಈಗ ನಾವು ನೂತನ ಗೃಹಸಚಿವರನ್ನು ಹೊಂದಿರುವುದರಿಂದ ಸಚಿವಾಲಯದ ಹೆಸರನ್ನೂ ‘ಕ್ಲೀನ್ ಚಿಟ್‌ಗಳನ್ನು ಒದಗಿಸುವ ಸಚಿವಾಲಯ ’ ಎಂದು ಬದಲಿಸುವುದು ಒಳ್ಳೆಯದು ಎಂದು ನಾನು ಭಾವಿಸಿದ್ದೇನೆ ’’ ಎಂದು ಖರ್ಗೆ ಟ್ವೀಟಿಸಿದ್ದಾರೆ.