×
Ad

ನೂತನ ಶಿಕ್ಷಣ ಸಚಿವ ರಮೇಶ ಪೋಖ್ರಿಯಾಲ್ ಪದವಿ ನಕಲಿಯೇ?

Update: 2019-06-01 20:08 IST

ದುಬೈ,ಜೂ.1: ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಸರಕಾರದಲ್ಲಿ ಶಿಕ್ಷಣ ಸಚಿವರಾಗಿರುವ ರಮೇಶ ಪೋಖ್ರಿಯಾಲ್ ಅವರು ಎರಡು ನಕಲಿ ಪದವಿಗಳನ್ನು ಹೊಂದಿದ್ದಾರೆ ಎಂದು indiatoday.in ವರದಿ ಮಾಡಿದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗಳಿಗೆ ಗುರಿಯಾಗಿದ್ದಾರೆ.

ಪೋಖ್ರಿಯಾಲ್ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಿಗೇ ಅವರು ಶ್ರೀಲಂಕಾದ ವಿವಿಯೊಂದರಿಂದ ಪಡೆದಿರುವ ಎರಡು ಡಾಕ್ಟರೇಟ್ ಪದವಿಗಳ ಮೇಲೆ ಮಾಧ್ಯಮ ವರದಿಯೊಂದು ಬೆಳಕು ಚೆಲ್ಲಿದೆ.

ಸುದ್ದಿ ಜಾಲತಾಣವು ವರದಿ ಮಾಡಿರುವಂತೆ 1990ರ ದಶಕದಲ್ಲಿ ಕೊಲಂಬೋದ ಮುಕ್ತ ಅಂತರರಾಷ್ಟ್ರೀಯ ವಿವಿ(ಒಐಯು)ಯು ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಕೊಡುಗೆಗಾಗಿ ಪೋಖ್ರಿಯಾಲ್ ಅವರಿಗೆ ಎರಡು ಡಾಕ್ಟರೇಟ್ ಪದವಿಗಳನ್ನು ಪ್ರದಾನಿಸಿತ್ತು. ಆದರೆ ಒಐಯು ಶ್ರೀಲಂಕಾದಲ್ಲಿ ವಿದೇಶಿ ವಿವಿ ಅಥವಾ ದೇಶಿಯ ವಿವಿಯಾಗಿ ನೋಂದಣಿಯನ್ನು ಹೊಂದಿಲ್ಲ ಎಂದು ಶ್ರೀಲಂಕಾ ಯುಸಿಸಿಯು ದೃಢಪಡಿಸಿದೆ ಎಂದು ವರದಿಯು ತಿಳಿಸಿದೆ.

ದೇಶದಲ್ಲಿ ಶಿಕ್ಷಣದ ಮಟ್ಟವನ್ನು ಎತ್ತರಿಸುವ ಜವಾಬ್ದಾರಿಯನ್ನು ಹೊಂದಿರುವ ವ್ಯಕ್ತಿ ಪ್ರಶ್ನಾರ್ಹ ದಾಖಲೆಗಳನ್ನು ಹೊಂದಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಪೋಖ್ರಿಯಾಲ್‌ರ ದಾಖಲೆಗಳಲ್ಲಿ ಎರಡು ಜನ್ಮ ದಿನಾಂಕಗಳಿರುವುದನ್ನೂ ಬಹಳಷ್ಟು ಜನರು ಬೆಟ್ಟು ಮಾಡಿದ್ದಾರೆ.

‘ಭಾರತದ ನೂತನ ಶಿಕ್ಷಣ ಸಚಿವರು ಶ್ರೀಲಂಕಾದ ನಕಲಿ ವಿವಿಯಿಂದ ಎರಡು ನಕಲಿ ಪದವಿಗಳನ್ನು ಹೊಂದಿದ್ದಾರೆ, ಇದಕ್ಕೂ ಮಿಗಿಲಾಗಿ ಅವರು ಎರಡು ಜನ್ಮ ದಿನಾಂಕಗಳನ್ನು ಹೊಂದಿದ್ದಾರೆ ’ಎಂದು ಟ್ವೀಟೊಂದು ಕುಟುಕಿದೆ.

ಆದರೆ ಪೋಖ್ರಿಯಾಲ್ ಅವರು ಜನ್ಮ ದಿನಾಂಕ ವಿವಾದದ ಬಗ್ಗೆ ಹೇಳಿಕೆಯನ್ನು ಹೊರಡಿಸಿ,ಹಿಂದು ಜಾತಕದಿಂದಾಗಿ ಜನ್ಮ ದಿನಾಂಕಗಳು ಬೇರೆಯಾಗಿವೆ ಎಂದು ಸಮಜಾಯಿಷಿ ನೀಡಿದ್ದಾರೆ.

ಸ್ಮೃತಿ ಇರಾನಿ ಬಳಿಕ ಪೋಖ್ರಿಯಾಲ್ ಅವರು ನಕಲಿ ಪದವಿಗಳ ಆರೋಪ ಹೊತ್ತ ಎರಡನೇ ಶಿಕ್ಷಣ ಸಚಿವರಾಗಿದ್ದಾರೆ ಎಂದು ಹಲವರು ಬೇಗುದಿಯನ್ನು ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಶಿಕ್ಷಣವಿಲ್ಲದಿದ್ದರೂ ಆಡಳಿತದ ಉತ್ತಮ ಅನುಭವವಿರುವ ಯಾರೇ ಆದರೂ ಮಾನವ ಸಂಪನ್ಮೂಲ ಸಚಿವಾಲಯವನ್ನು ನಿರ್ವಹಿಸಬಲ್ಲರು. ಆದರೆ ಖಂಡಿತವಾಗಿಯೂ ನಕಲಿ ಪದವಿ ಹೊಂದಿರುವ ವ್ಯಕ್ತಿಯಲ್ಲ,ಇದು ವಿವಿಗಳಲ್ಲಿ ವ್ಯಾಸಂಗ ಮಾಡುವವರನ್ನು ಅಣಕಿಸುತ್ತದೆೆ ಎಂದೂ ಟ್ವೀಟ್‌ಗಳು ಹರಿದಾಡಿವೆ.

ಪೋಖ್ರಿಯಾಲ್ ಹಿಂದೆಯೂ ತನ್ನ ಅವೈಜ್ಞಾನಿಕ ಹೇಳಿಕೆಗಳಿಂದಾಗಿ ಸುದ್ದಿಯಾಗಿದ್ದರು. ಜ್ಯೋತಿಷ್ಯ ಶಾಸ್ತ್ರವು ವಿಜ್ಞಾನಕ್ಕಿಂತ ಹೆಚ್ಚಿನ ಸ್ಥಾನದಲ್ಲಿರಬೇಕು. ಜ್ಯೋತಿಷ್ಯ ಶಾಸ್ತ್ರದ ಎದುರು ವಿಜ್ಞಾನವು ಕುಬ್ಜವಾಗಿದೆ. ನಾವಿಂದು ಪರಮಾಣು ವಿಜ್ಞಾನದ ಬಗ್ಗೆ ಮಾತನಾಡುತ್ತಿದ್ದೇವೆ, ಆದರೆ ಕಣಾದ ಋಷಿಗಳು ಒಂದು ಲಕ್ಷ ವರ್ಷಗಳ ಹಿಂದೆಯೇ ಪರಮಾಣು ಪರೀಕ್ಷೆಯನ್ನು ನಡೆಸಿದ್ದರು ಎಂದು 2014ರಲ್ಲಿ ಹೇಳುವ ಮೂಲಕ ಅವರು ಎಲ್ಲರನ್ನೂ ದಂಗು ಬಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News