ಅಮರ್: ಹಳೆಯ ಸ್ಟೋರಿಗೆ ಹೊಸ ಗ್ರಾಮರ್

Update: 2019-06-01 17:58 GMT

ಅಮರ್ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನವ ನಾಯಕನೊಬ್ಬನ ಪ್ರವೇಶವಾಗಿದೆ. ಅದು ಸಾಕ್ಷಾತ್ ರೆಬಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಎಂಟ್ರಿ. ಆದರೆ ಸ್ಟಾರ್ ಪುತ್ರನೊಬ್ಬನ ಬಹುನಿರೀಕ್ಷಿತ ಚಿತ್ರದ ಮೊದಲ ಎಂಟ್ರಿಯ ದೃಶ್ಯವನ್ನೇ ಅನಿರೀಕ್ಷಿತ ಎನ್ನುವ ರೀತಿಯಲ್ಲಿ ಬದಲಾಯಿಸಿರುವ ಕೀರ್ತಿ ನಿರ್ದೇಶಕ ನಾಗಶೇಖರ್ ಅವರಿಗೆ ಸಲ್ಲುತ್ತದೆ.

ಸಾಮಾನ್ಯವಾಗಿ ನಿರ್ದೇಶಕರು ನಾಯಕನಿಗೆ ಒಂದಷ್ಟು ನೆಗೆಟಿವ್ ಶೇಡ್ ನೀಡಿ ಆತನನ್ನು ವಿಭಿನ್ನವಾಗಿಸಲು ಪ್ರಯತ್ನಿಸುವುದು ಒಂದೆರಡು ಸಿನೆಮಾಗಳಲ್ಲಿ ಆತನ ನಾಯಕತನವನ್ನು ತೋರಿಸಿದ ಬಳಿಕ. ಆದರೆ ನಿರ್ದೇಶಕ ನಾಗಶೇಖರ್ ಇಲ್ಲಿ ಪ್ರಥಮ ದೃಶ್ಯದಲ್ಲೇ ನೆಗೆಟಿವ್ ಇಂಟ್ರಡಕ್ಷನ್ ಮೂಲಕ ಅಮರ್ ಎನ್ನುವ ನಾಯಕ ಪಾತ್ರವನ್ನು ತೋರಿಸುತ್ತಾರೆ. ಅಮರನಾಥ್ ಎಂಬ ಪ್ರೀತಿ ಪಾತ್ರರ ಅಮರ್, ಯಾರದೋ ದುಡ್ಡನ್ನು ಮನಬಂದಂತೆ ಖರ್ಚು ಮಾಡುವ ಯುವಕ ಎಂದು ತೋರಿಸುವ ನಡುವೆಯೇ ಆತನ ಫ್ಲ್ಯಾಷ್‌ಬ್ಯಾಕ್ ಸ್ಟೋರಿ ಶುರುವಾಗುತ್ತದೆ. ಕಾಲೇಜು ದಿನದಲ್ಲಿ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗದಿರಲಿಕ್ಕಾಗಿ ಆಕೆಯ ತಂದೆಯೊಂದಿಗೆ ಕೋಟಿಗಳ ವ್ಯವಹಾರ ನಡೆಸಿದ ಹುಡುಗ ಈತ ಎನ್ನುವಲ್ಲಿಗೆ ಚಿತ್ರ ಮಧ್ಯಂತರ ತಲುಪಿರುತ್ತದೆ.

ನಿರೀಕ್ಷೆಯಂತೆ ಆ ಮೇಲಿನ ಕತೆ ನಾಯಕನ ಈ ನೆಗೆಟಿವ್ ಶೇಡ್ ವರ್ತನೆಗಳಿಗೆ ಕಾರಣ ನೀಡುತ್ತಾ ಹೋಗುತ್ತದೆ. ಹಾಗೆ ನೋಡಿದರೆ ಚಿತ್ರದ ಕತೆ ಹೊಸದೇನೂ ಅಲ್ಲ. ನಿರೂಪಣೆಯಲ್ಲಿ ಕೂಡ ಹೊಸತನ ಇಲ್ಲವಾದರೂ ಆರಂಭದಲ್ಲಿ ಚಿತ್ರ ಏನು ಹೇಳಲು ಹೊರಟಿದೆ ಎನ್ನುವ ವಿಚಾರದಲ್ಲಿ ಒಂದಷ್ಟು ಗೋಜಲು ಉಂಟುಮಾಡುವಲ್ಲಿ ಯಶಸ್ವಿಯಾಗಿದೆ! ಆದರೆ ಒಂದಷ್ಟು ನೈಜ ಘಟನೆಗಳ ಸ್ಫೂರ್ತಿ ಪಡೆದು ನಿರ್ದೇಶಿಸಲಾದ ದೃಶ್ಯಗಳು ಕತೆಗೆ ಪೂರಕವಾಗಿವೆ ಎನ್ನುವುದು ವಿಶೇಷ. ಉದಾಹರಣೆಗೆ ನಾಯಕನ ತಂದೆಯ ಸಾವಿನ ಸನ್ನಿವೇಶ ಕತೆಗೆ ಹೊಂದುತ್ತದೆ. ಮಾತ್ರವಲ್ಲ ಆ ಘಟನೆಗೂ ಮೊದಲು ಮಗನ ಮೇಲೆ ಪ್ರಕರಣ ದಾಖಲಾಗುವ ಮತ್ತೊಂದು ದೃಶ್ಯ ಕೂಡ ನಿರ್ದೇಶಕರು ಏನು ಹೇಳ ಹೊರಟಿದ್ದಾರೆ ಎನ್ನುವುದನ್ನು ವೇದ್ಯಗೊಳಿಸುತ್ತದೆ. ಪೊಲೀಸರು ಅವಸರದಿಂದ ಪ್ರಕರಣ ದಾಖಲಿಸುವುದು ಮತ್ತು ಮಾಧ್ಯಮಗಳು ಅಷ್ಟೇ ಬೇಗ ಅವುಗಳಿಗೆ ಪ್ರಚಾರ ನೀಡುವುದು ಎರಡೂ ತಪ್ಪು ಎನ್ನುವ ಸಂದೇಶವನ್ನು ನೀಡುವ ಪ್ರಯತ್ನ ನಾಗಶೇಖರ್ ಅವರದು! ಅದೇ ವೇಳೆ ಮಾತು ಕೊಡುವ ಮತ್ತು ಬೇರೆ ಯೋಚಿಸದೇ ಅದನ್ನು ನಡೆಸಿಕೊಡುವ ವ್ಯಕ್ತಿತ್ವ ನಾಯಕನ ಬದುಕಿನಲ್ಲಿ ಮೂಡಿಸುವ ಪರಿಣಾಮಗಳನ್ನು ಕೂಡ ಚಿತ್ರ ಹೇಳುತ್ತದೆ.

ಅಮರನಾಥನಾಗಿ ಅಭಿಷೇಕ್ ಸಹಜವಾಗಿಯೇ ತಮ್ಮ ತಂದೆಯನ್ನು ಬಹಳಷ್ಟು ಹೋಲುತ್ತಾರೆ. ಮೊದಲ ಚಿತ್ರದಲ್ಲೇ ಆ್ಯಕ್ಷನ್‌ಗಿಂತ ಭಾವ ವೈವಿಧ್ಯವನ್ನು ತೋರಿಸುವಲ್ಲಿ ಅಭಿ ಗೆದ್ದಿದ್ದಾರೆ. ಆದರೆ ಅವರ ವಯಸ್ಸನ್ನು ಗಮನಿಸಿದರೆ ಕಾಲೇಜ್ ಹುಡುಗನಾಗಿ ಇನ್ನಷ್ಟು ಲವಲವಿಕೆ ತುಂಬಿದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಉತ್ತಮ ಎನಿಸದಿರದು. ತಾನ್ಯಾ ಹೋಪ್ ಅವರಿಗೂ ಎರಡು ಶೇಡ್ ಪಾತ್ರಗಳಿವೆ. ಆದರೆ ದ್ವಿತೀಯಾರ್ಧದಲ್ಲಿ ಅವರ ಲುಕ್‌ನಲ್ಲಿ ಭಾವನೆಗಳೇ ಕಾಣಿಸುವುದಿಲ್ಲ. ಅಭಿಷೇಕ್ ತಂದೆಯಾಗಿ ದೀಪಕ್ ಶೆಟ್ಟಿ ಗಮನ ಸೆಳೆಯುತ್ತಾರೆ. ತಾಯಿಯಾಗಿ ಸುಧಾರಾಣಿ ಮತ್ತು ಮಾವನಾಗಿ ದೇವರಾಜ್ ಎಂದಿನಂತೆ ಕ್ಲಾಸ್ ಅಭಿನಯ ನೀಡಿದ್ದಾರೆ. ಅತಿಥಿ ಪಾತ್ರದಲ್ಲಿ ಬರುವ ದರ್ಶನ್ ಅವರಿಂದ ಅಭಿಮಾನಿಗಳು ಇನ್ನಷ್ಟು ನಿರೀಕ್ಷೆ ಮಾಡುವುದು ಸಹಜ. ಆದರೆ ಮತ್ತೋರ್ವ ಅತಿಥಿ ಪಾತ್ರಧಾರಿ ನಿರೂಪ್ ಭಂಡಾರಿಯ ಪಾತ್ರಕ್ಕೆ ಹೋಲಿಸಿದರೆ ದರ್ಶನ್ ಅವರ ಪ್ರಸ್ತುತಿಯೇ ಹೆಚ್ಚು!

ಅಂದಹಾಗೆ ರಚಿತಾರಾಮ್ ಪಾತ್ರ ಏನು ಎಂದು ಕೇಳಬಾರದು. ಆದರೆ ಈ ಎಲ್ಲ ಪಾತ್ರಗಳು ಸೇರಿ ಹಾಡುವ ಒಂದು ಕೊಡವ ಗೀತೆ ಚಿತ್ರದ ಆಕರ್ಷಕ ಅಂಶಗಳಲ್ಲೊಂದು. ಅದರಲ್ಲಿಯೂ ಕೊರಿಯೋಗ್ರಫಿಯಲ್ಲಿ ಮೂಡಿ ಬಂದಿರುವ ಕೊಡಗುತನ ಮನ ಸೆಳೆಯುವಂತಿದೆ. ಚಿಕ್ಕಣ್ಣ ಮತ್ತು ಸಾಧು ಕೋಕಿಲರಂಥ ಕಲಾವಿದರು ಇದ್ದರೂ ಅವರನ್ನು ಬಳಸಿಕೊಂಡು ಬಟ್ಟೆಗೆ ಸಂಬಂಧಿಸಿದ ಹಾಸ್ಯವನ್ನೇ ಮಾಡುವ ದರ್ದು ನಾಗಶೇಖರ್‌ಗೆ ಬಂದಿರುವುದು ವಿಪರ್ಯಾಸ. ಉಳಿದಂತೆ ನಿರ್ದೇಶಕರು ತಮ್ಮ ಶೈಲಿಯ ಪ್ರಕೃತಿ ರಮಣೀಯತೆಯನ್ನು ತೋರಿಸುವ ಪ್ರಯತ್ನ ಇಲ್ಲಿಯೂ ಮಾಡಿದ್ದಾರೆ. ಅದಕ್ಕೆ ಸತ್ಯ ಹೆಗ್ಡೆ ಛಾಯಾಗ್ರಹಣ ಸಾತ್ ನೀಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದ ಕೊನೆಯಲ್ಲಿ ಶೂಟಿಂಗ್ ಸೆಟ್‌ನಲ್ಲಿ ಅಂಬರೀಷ್ ಒಲವಿನ ಉಡುಗೊರೆ ಹಾಡಿಗೆ ಹೆಜ್ಜೆ ಹಾಕಿರುವ ಸನ್ನಿವೇಶ ತೋರಿಸುತ್ತಾರೆ. ಅದು ಅಂಬರೀಷ್ ಕ್ಯಾಮರಾ ಮುಂದೆ ಹಾಕಿರುವ ಕೊನೆಯ ಹೆಜ್ಜೆ ಎನ್ನಲಾಗಿದೆ. ಆದರೆ ಅಂಬರೀಶ್ ಹೆಜ್ಜೆಗಳ ಮುಂದುವರಿದ ಭಾಗ ಅಮರ್‌ನಲ್ಲಿರುವುದು ಖಚಿತವೆನಿಸುತ್ತದೆ.

ತಾರಾಗಣ: ಅಭಿಷೇಕ್, ತಾನ್ಯಾ ಹೋಪ್, ದರ್ಶನ್
ನಿರ್ದೇಶನ: ನಾಗಶೇಖರ್
ನಿರ್ಮಾಣ: ಎನ್. ಸಂದೇಶ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News