ಉಗ್ರರಿಗೆ ಹೈದರಾಬಾದ್ ಸುರಕ್ಷತಾ ವಲಯ ಎಂದ ಕೇಂದ್ರ ಸಚಿವ ಕಿಶನ್ ರೆಡ್ಡಿ

Update: 2019-06-01 18:14 GMT

ಹೊಸದಿಲ್ಲಿ, ಜೂ.1: ಹೈದರಾಬಾದ್ ಉಗ್ರರಿಗೆ ಸುರಕ್ಷಿತಾ ತಾಣ ಎಂದು ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಒಳಗಾಗಿರುವ ನೂತನ ಸಹಾಯಕ ಗೃಹ ಸಚಿವ ಜಿ ಕೃಷ್ಣಾ ರೆಡ್ಡಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಹೈದರಾಬಾದ್‌ನಲ್ಲಿ ರಾಷ್ಟ್ರೀಯ ತನಿಖಾ ತಂಡ ಪ್ರತೀ ಎರಡು-ಮೂರು ತಿಂಗಳಿಗೆ ಭಯೋತ್ಪಾದಕರನ್ನು ಬಂಧಿಸುತ್ತಿದೆ ಎಂದು ರೆಡ್ಡಿ ಹೇಳಿದ್ದಾರೆ. ರೆಡ್ಡಿ ಹೇಳಿಕೆಯನ್ನು ಖಂಡಿಸಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಉವೈಸಿ, ಮುಸ್ಲಿಮರು ಇರುವಲ್ಲೆಲ್ಲಾ ಬಿಜೆಪಿಗೆ ಉಗ್ರರು ಕಾಣುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇಂತಹ ಬೇಜಾವಾಬ್ದಾರಿ ಹೇಳಿಕೆ ಸಚಿವರಿಗೆ ಹೇಳಿಸಿದ್ದಲ್ಲ. ಆದರೆ ಇಂತಹ ಹೇಳಿಕೆಯನ್ನು ಅವರಿಂದ ನಿರೀಕ್ಷಿಸಿದ್ದೆವು. ಇದು ಅವರಿಗೆ ತೆಲಂಗಾಣ, ಹೈದರಾಬಾದ್ ಬಗ್ಗೆ ಇರುವ ದ್ವೇಷ ಭಾವನೆಯನ್ನು ತೋರಿಸುತ್ತದೆ. ಇದನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ಉವೈಸಿ ಹೇಳಿದ್ದಾರೆ.

ಹೈದರಾಬಾದ್‌ನ ಅಭಿವೃದ್ಧಿಯನ್ನು ಬಿಜೆಪಿ ಸಹಿಸುತ್ತಿಲ್ಲ. ಇಲ್ಲಿ ಕೋಮು ಗಲಭೆ ಇಲ್ಲ, ಧಾರ್ಮಿಕ ಹಬ್ಬಗಳು ಶಾಂತ ರೀತಿಯಲ್ಲಿ ನಡೆಯುತ್ತಿವೆ. ಬಹುಷಃ ಇದು ಬಿಜೆಪಿಯವರಿಗೆ ಇಷ್ಟವಿಲ್ಲ ಎಂದು ಕಾಣುತ್ತದೆ. ಹೈದರಾಬಾದ್ ಉಗ್ರರಿಗೆ ಸುರಕ್ಷಿತ ತಾಣ ಎಂದು ಕಳೆದ 5 ವರ್ಷಗಳಲ್ಲಿ ರಾ, ಎನ್‌ಐಎ ಎಷ್ಟು ಬಾರಿ ಲಿಖಿತವಾಗಿ ತಿಳಿಸಿದೆ ಎಂದು ಸಚಿವರು ಉತ್ತರಿಸಬೇಕು ಎಂದು ಉವೈಸಿ ಆಗ್ರಹಿಸಿದ್ದಾರೆ. ಆದರೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ರೆಡ್ಡಿ, ಬೆಂಗಳೂರು, ಭೋಪಾಲದಲ್ಲಿ ಯಾವುದಾದರೊಂದು ಘಟನೆ ಸಂಭವಿಸಿದರೆ ಅದರ ಮೂಲ ಹೈದರಾಬಾದ್‌ನಲ್ಲಿ ಇರುತ್ತದೆ. ಪ್ರತೀ 2-3 ತಿಂಗಳಿಗೆ ರಾಜ್ಯ ಪೊಲೀಸರು, ಎನ್‌ಐಎ ತಂಡ ಹೈದರಾಬಾದ್‌ನಲ್ಲಿ ಉಗ್ರರನ್ನು ಸೆರೆ ಹಿಡಿಯುತ್ತಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News