ವಿವಾದ ಸೃಷ್ಟಿಸಿದ ಗಾಂಧಿ, ಗೋಡ್ಸೆ ಕುರಿತ ಐಎಎಸ್ ಅಧಿಕಾರಿಯ ಟ್ವೀಟ್

Update: 2019-06-06 12:08 GMT

ಹೊಸದಿಲ್ಲಿ, ಜೂ.2: ಮಹಾತ್ಮಾ ಗಾಂಧೀಜಿ ಮತ್ತು ಅವರ ಹಂತಕ ನಾಥೂರಾಮ್ ಗೋಡ್ಸೆ ಬಗ್ಗೆ ಟ್ವೀಟ್ ಮಾಡಿರುವ ಐಎಎಸ್ ಅಧಿಕಾರಿಯೊಬ್ಬರು ವಿವಾದ ಸೃಷ್ಟಿಸಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಭಾರೀ ಒತ್ತಾಯ ಕೇಳಿಬಂದಿದೆ.

ಮಹಾರಾಷ್ಟ್ರದ ಐಎಎಸ್ ಅಧಿಕಾರಿಯಾಗಿರುವ ನಿಧಿ ಚೌಧರಿ ಮೇ 17ರಂದು, “ಮಹಾತ್ಮಾ ಗಾಂಧೀಜಿಯವರ 150ನೆ ಜನ್ಮ ದಿನಾಚರಣೆಯನ್ನು ನಡೆಸುತ್ತಿದ್ದಾರೆ. ನಮ್ಮ ಕರೆನ್ಸಿಯಿಂದ ಅವರ ಮುಖವನ್ನು ತೆಗೆಯಬೇಕಾಗಿದೆ. ವಿಶ್ವಾದ್ಯಂತ ಅವರ ಪ್ರತಿಮೆಗಳನ್ನು ತೆರವುಗೊಳಿಸಬೇಕಿದೆ. ಅವರ ಹೆಸರಿನಲ್ಲಿರುವ ರಸ್ತೆಗಳು ಮತ್ತು ಸಂಸ್ಥೆಗಳ ಹೆಸರುಗಳನ್ನು ಬದಲಿಸಬೇಕಿದೆ. ಇದು ನಾವೆಲ್ಲರೂ ಸಲ್ಲಿಸುವ ನಿಜವಾದ ಗೌರವವಾಗಬಹುದು. ಧನ್ಯವಾದಗಳು ಗೋಡ್ಸೆ 30.01. 1948ಕ್ಕಾಗಿ” ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ನಂತರ ಈ ಟ್ವೀಟನ್ನು ಡಿಲಿಟ್ ಮಾಡಲಾಗಿತ್ತು. “ಕೂಡಲೇ ಆಕೆಯನ್ನು ಅಮಾನತುಗೊಳಿಸಬೇಕು. ಐಎಎಸ್ ಅಧಿಕಾರಿಯೊಬ್ಬರು ಹೇಗೆ ರಾಷ್ಟ್ರಪಿತನಿಗೆ ಅಗೌರವ ಸಲ್ಲಿಸಬಹುದು ಮತ್ತು ಅವಮಾನಿಸಬಹುದು” ಎಂದು ಎನ್ ಸಿಪಿ ಶಾಸಕ ಜಿತೇಂದ್ರ ಅಹ್ವದ್ ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿ ತನ್ನ ಟ್ವೀಟನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ. “ನನ್ನ ಟ್ವೀಟನ್ನು ಡಿಲಿಟ್ ಮಾಡಿದ್ದೇನೆ. 2011ರಿಂದ ನನ್ನ ಟೈಮ್ ಲೈನ್ ಫಾಲೋ ಮಾಡಿದವರಿಗೆ ಮಾತ್ರ ನಾನು ಗಾಂಧೀಜಿಯನ್ನು ಕನಸಿನಲ್ಲಿಯೂ ಅವಮಾನಿಸಲು ಸಾಧ್ಯವಿಲ್ಲ ಎಂದು ತಿಳಿಯುತ್ತದೆ. ನನ್ನ ಟ್ವೀಟ್ ವ್ಯಂಗ್ಯದಿಂದ ಕೂಡಿತ್ತು. ಗಾಂಧೀಜಿ ವಿರುದ್ಧ ಕೆಲವರು ವೈಯಕ್ತಿಕ ನಿಂದನೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ ನಾನು ಆ ಪೋಸ್ಟ್ ಮಾಡಿದ್ದೆ. ಕೆಲವರು ಅದನ್ನು ತಪ್ಪಾಗಿ ಅರ್ಥೈಸಿದ್ದಾರೆ” ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News