ಗಿಡ ನೆಟ್ಟು ಪೋಷಣೆ ನಡೆಯಲಿ

Update: 2019-06-03 18:12 GMT

ಮಾನ್ಯರೇ,

ವಿಶ್ವ ಪರಿಸರ ದಿನಾಚರಣೆಯ ಆಯೋಜನೆಗಳು ಜೂ.5 ರಂದು ಅಲ್ಲಲ್ಲಿ ಉತ್ಸವದ ರೀತಿಯಲ್ಲಿ ನಡೆಯುತ್ತವೆ. ಇದುವರೆಗೆ ನಡೆದ ಪರಿಸರ ಕಾರ್ಯಕ್ರಮಗಳು ನೈಜಾರ್ಥದಲ್ಲಿ ನಡೆದದ್ದು ಹೌದೇ ಆದಲ್ಲಿ ಭೂಮಡಿಲ ಮೇಲೆ ಹಸಿರುಡುಗೆ ಕಾಣುತಿತ್ತು. ಅಲ್ಲದೆ ಪ್ರಕೃತಿಧರ್ಮವು ಕಾಲ ಕಾಲಕ್ಕೆ ಸರಿಯಾಗಿ ಪ್ರಕಟವಾಗುತಿತ್ತು. ಬಹುತೇಕ ಕಾರ್ಯಕ್ರಮಗಳು ಫೋಟೋ ಕ್ಲಿಕ್ಕಿಸಿಕೊಳ್ಳುವ ಸಂತೋಷ ಕೂಟಗಳಾಗುತ್ತಿವೆ. ಪತ್ರಿಕೆಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವ ಸುದ್ದಿಗಳಾಗುತ್ತಿವೆ. ಗಿಡ ನೆಟ್ಟಾದ ನಂತರ ಅದರ ಹತ್ತಿರ ಸುಳಿಯುವವರು ಯಾರೊಬ್ಬರೂ ಇರುವುದಿಲ್ಲ. ನೀರುಣಿಸುವವರು ಇಲ್ಲದೆ ನೆಟ್ಟ ಗಿಡಗಳು ಸುಡುಬಿಸಿಲಿಗೆ ಜೀವ ಪಡೆಯದೆ ಸತ್ತು ಹೋಗುವುದುಂಟು. ಜಾನುವಾರುಗಳ ಉದರ ಸೇರುವುದುಂಟು. ಸದ್ದಿಲ್ಲದೆ ನಿರಂತರವಾಗಿ ಪರಿಸರದ ಸೇವೆಯಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ನಿರತರಾಗಿರುವ ಪರಿಸರ ಪರಿಚಾರಕರು ನಾಗರಿಕ ಸಮಾಜದಲ್ಲಿ ಬಹಳಷ್ಟು ಮಂದಿ ಇದ್ದಾರೆ. ಅವರನ್ನು ಬೆಂಬಲಿಸುವ, ಅವರ ಸೇವಾಕಾರ್ಯವು ಅನುಕರಣೆ ಮಾಡುವ ಗುಣಧರ್ಮಗಳು ಬೆಳೆಯ ಬೇಕು. ಯಾವತ್ತೂ ಪರಿಸರ ಕಾಳಜಿಯು ನಾಟಕೀಯ ಪ್ರದರ್ಶನ ಆಗದೆ, ಪ್ರಾಮಾಣಿಕವಾದ ಸಾಮಾಜಿಕ ಪ್ರಜ್ಞೆ ಆಗಬೇಕು. ನೆಟ್ಟ ಗಿಡಗಳ ಪೋಷಣೆ ಕಾರ್ಯವನ್ನು ಮೊದಲು ಮಾಡಬೇಕು. ಆಗ ಮಾತ್ರ ಭೂಮಡಿಲು ಹಸಿರಾಗಿಸಲು, ಜಲಕ್ಷಾಮ ದೂರವಾಗಿಸಲು, ಏರುತ್ತಿರುವ ತಾಪಮಾನವನ್ನು ತಣಿಸಲು, ಶುದ್ಧ ಪ್ರಾಣ ವಾಯುವನ್ನು ಪಡೆಯಲು ಸಾಧ್ಯವಾಗುತ್ತದೆ.

Writer - ತಾರಾನಾಥ್ ಮೇಸ್ತ, ಶಿರೂರು

contributor

Editor - ತಾರಾನಾಥ್ ಮೇಸ್ತ, ಶಿರೂರು

contributor

Similar News