ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಖರ್ಚು ಮಾಡಿದ್ದು ಎಷ್ಟು ಸಾವಿರ ಕೋಟಿ ಗೊತ್ತೇ ?
ಹೊಸದಿಲ್ಲಿ : ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಚಾರ ನಿಮಿತ್ತ ಬರೋಬ್ಬರಿ 27,000 ಕೋಟಿ ರೂ. ವೆಚ್ಚ ಮಾಡಿದೆ ಎಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಸೋಮವಾರ ಬಿಡುಗಡೆಗೊಳಿಸಿದ್ದು, ಈ ಬಗ್ಗೆ ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.
ಇದು ಈ ಬಾರಿ ವಿವಿಧ ಪಕ್ಷಗಳು ಪ್ರಚಾರಕ್ಕಾಗಿ ಬಳಸಿದ ಒಟ್ಟು ಹಣದ ಶೇ 45ರಷ್ಟಾಗಿದೆ. ಈ ವರದಿಯ ಪ್ರಕಾರ 2019 ಲೋಕಸಭಾ ಚುನಾವಣೆಗೆ ವಿವಿಧ ಪಕ್ಷಗಳು 60,000 ಕೋಟಿ ರೂ. ವ್ಯಯಿಸಿವೆ.
ಬಿಜೆಪಿಯು 1998 ಲೋಕಸಭಾ ಚುನಾವಣೆಯಲ್ಲಿ ಒಟ್ಟು ವೆಚ್ಚದ ಶೇ 20ರಷ್ಟು ವ್ಯಯಿಸಿತ್ತು. 2009ರಲ್ಲಿ ಕಾಂಗ್ರೆಸ್ ಪಕ್ಷ ವಿವಿಧ ಪಕ್ಷಗಳ ಒಟ್ಟು ವೆಚ್ಚದ ಶೇ 40ರಷ್ಟು ವೆಚ್ಚ ಮಾಡಿದ್ದರೆ ಈ ಬಾರಿ ಶೇ 15ರಿಂದ ಶೇ 20ರಷ್ಟು ವೆಚ್ಚ ಮಾಡಿದೆ ಎಂದು ವರದಿ ತಿಳಿಸಿದೆ.
ಈ ಬಾರಿ ಸರಾಸರಿ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳು ಒಟ್ಟು ರೂ 100 ಕೋಟಿಯಷ್ಟು ಹಣವನ್ನು ಪ್ರಚಾರಕ್ಕೆ ಖರ್ಚು ಮಾಡಿವೆ. ವರದಿಯ ಪ್ರಕಾರ ರೂ 12,000 ಕೋಟಿಯಿಂದ ರೂ 15,000 ಕೋಟಿ ಹಣವನ್ನು ಮತದಾರರಿಗೆ ಚುನಾವಣೆ ಸಂದರ್ಭ ನೇರವಾಗಿ ವಿತರಿಸಲಾಗಿದ್ದರೆ, ರೂ 20,000 ಕೋಟಿಯಿಂದ ರೂ 25,000 ಕೋಟಿ ಹಣ ಪ್ರಚಾರಕ್ಕಾಗಿ, ರೂ 5,000 ಕೋಟಿಯಿಂದ ರೂ 6,000 ಕೋಟಿಯಷ್ಟು ಪ್ರಯಾಣ ವೆಚ್ಚಕ್ಕಾಗಿ ರೂ 10,000 ಕೋಟಿಯಿಂದ ರೂ 12,000 ಕೋಟಿ ತನಕ ಅಧಿಕೃತ ವೆಚ್ಚಗಳಿಗಾಗಿ ಹಾಗೂ ರೂ 3,000 ಕೋಟಿಯಿಂದ ರೂ 6,000 ಕೋಟಿ ತನಕ ಇತರ ಉದ್ದೇಶಗಳಿಗಾಗಿ ಬಳಸಲಾಗಿದೆ.
ಈ ಬಾರಿ ಚುನಾವಣೆಗೆ ವೆಚ್ಚ ಮಾಡಿದ ಹಣದ ಬಗ್ಗೆ ಯೋಚಿಸುವಾಗ ಭಯವಾಗುತ್ತದೆ, ಪ್ರಚಾರಕ್ಕಾಗಿ ಮಾಡುವ ವೆಚ್ಚದ ಕುರಿತಂತೆ ಸಂಸತ್ತು ಚರ್ಚೆ ನಡೆಸಬೇಕು ಎಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಅಧ್ಯಕ್ಷ ಎನ್ ಭಾಸ್ಕರ್ ರಾವ್ ಹೇಳಿದ್ದಾರೆ.