ಮಹಿಳೆಯನ್ನು ಇರಿದು ಕೊಂದವನ ಪತ್ತೆಗೆ ನೆರವಾದ ಆಟೋದಲ್ಲಿದ್ದ ‘ರಜಿನಿಕಾಂತ್’!

Update: 2019-06-04 09:41 GMT

ನೆಲ್ಲೂರ್, ಜೂ.4: ಆಟೋರಿಕ್ಷಾವೊಂದರಲ್ಲಿದ್ದ ನಟ ರಜಿನಿಕಾಂತ್ ಅವರ ಚಿತ್ರವುಳ್ಳ ಸ್ಟಿಕ್ಕರ್ ಒಂದು ಪೊಲೀಸರಿಗೆ ಕೊಲೆ ಪ್ರಕರಣವೊಂದನ್ನು ಬೇಧಿಸಲು ಸಹಾಯ ಮಾಡಿರುವ ಕುತೂಹಲಕಾರಿ ಘಟನೆಯೊಂದು ನಡೆದಿದೆ. 

ಸಿಸಿಟಿವಿ ಕ್ಯಾಮರಾ ದೃಶ್ಯದಲ್ಲಿ ಕೊಲೆ ನಡೆದ ಮನೆಯ ಹೊರಗೆ ಕೊಲೆಗಿಂತ ಮುಂಚೆ ಕಾಣಿಸಿದ್ದ ಆಟೋರಿಕ್ಷಾದಲ್ಲಿ ರಜಿನಿಕಾಂತ್ ಸ್ಟಿಕ್ಕರ್ ಇರುವುದನ್ನು ಪೊಲೀಸರು ಪತ್ತೆ ಹಚ್ಚಿ ಅದರ ಜಾಡು ಹಿಡಿದು ಆರೋಪಿ ರಾಮಸ್ವಾಮಿ ಅಲಿಯಾಸ್ ವೇಮಸನಿ ಶ್ರೀಕಾಂತ್ ಅಲಿಯಾಸ್ ರಜಿನಿಕಾಂತ್ (22) ಎಂಬಾತನನ್ನು ಬಂಧಿಸಿದ್ದಾರೆ.

 ನೆಲ್ಲೋರ್ ನ ರಾಮಲಿಂಗಾಪುರ ನಿವಾಸಿಯಾಗಿರುವ 45 ವರ್ಷದ ಮಹಿಳೆ,  ಖಾಸಗಿ ಶಾಲೆಯೊಂದರಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದ ಬೊಂಡಿಲಿ ನಿರ್ಮಲಾ ಭಾಯಿ (45) ಎಂಬಾಕೆಯನ್ನು ಆತ ಹಣ ಹಾಗೂ ಚಿನ್ನದಾಸೆಗೆ ಹತ್ಯೆಗೈದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಿರ್ಮಲಾಳ ಪತಿ ರಮೇಶ್ ಸಿಂಗ್ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದು ಪುತ್ರಿ ತಿರುಪತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದರೆ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ. ಆಕೆ  ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು.

ಆರೋಪಿ ಆಕೆಯ ಕುತ್ತಿಗೆಗೆ 10ಕ್ಕೂ ಹೆಚ್ಚು ಬಾರಿ ಚೂರಿಯಿಂದ ಇರಿದು ಕೊಂದು ನಂತರ ಮನೆಯಲ್ಲಿದ್ದ ಹಳೆ ದಿನಪತ್ರಿಕೆಗಳನ್ನು ಬಳಸಿ ಮೃತದೇಹವನ್ನು ಸುಡಲು ಯತ್ನಿಸಿದ್ದ. ಗ್ಯಾಸ್ ಸಿಲಿಂಡರ್ ಆನ್ ಮಾಡಿ ಇದೊಂದು ಆಕಸ್ಮಿಕ ಸಾವು ಎಂಬಂತೆ ಬಿಂಬಿಸಲೂ ಪ್ರಯತ್ನಿಸಿದ್ದ. ನೆರೆಹೊರೆಯವರು ಮನೆಯಿಂದ ಹೊಗೆ ಏಳುತ್ತಿದ್ದುದನ್ನು ಕಂಡು ಬೆಂಕಿ ನಂದಿಸಲು ಯತ್ನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ರಜಿನಿಕಾಂತ್ ಸ್ಟಿಕ್ಕರ್ ಇದ್ದ ಆಟೋವೊಂದು  ಮನೆಗೆ ಕೊಲೆ ನಡೆಯುವ ಮುಂಚೆ ಆಗಮಿಸಿ ನಂತರ ಹೊರಟು ಹೋಗಿದ್ದನ್ನು ಗಮನಿಸಿದ್ದರು. ನಂತರ  ನಗರದ 1000ಕ್ಕೂ ಅಧಿಕ ಆಟೋಗಳನ್ನು ತಪಾಸಣೆಗೈದಿದ್ದರು. ಜೂನ್ 3ರಂದು ಅಂತಿಮವಾಗಿ ಈ ಆಟೋ ನೆಲ್ಲೂರ್ ನ ಮುತ್ತುಕೂರ್ ರಸ್ತೆಯ ಅಪೋಲೋ ಆಸ್ಪತ್ರೆ ಜಂಕ್ಷನ್ ನಲ್ಲಿ ಪತ್ತೆಯಾಗಿತ್ತು. ವಿಚಾರಣೆ ನಡೆಸಿದಾಗ ಚಾಲಕ ರಾಮಸ್ವಾಮಿ ತನ್ನ ಕೃತ್ಯ ಒಪ್ಪಿಕೊಂಡಿದ್ದ.

ನಿರ್ಮಲಾಳ ಚಿನ್ನದ ಸರ, ಬಳೆ, ಕಿವಿಯೋಲೆ ಹಾಗೂ ಆಕೆಯ ಪರ್ಸ್ ನಲ್ಲಿದ್ದ ರೂ 2,000 ಕದ್ದಿದ್ದಾಗಿ ಆತ ಬಾಯ್ಬಿಟ್ಟಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News