ಮತ್ತೆ ಮಹಾಮೈತ್ರಿ ಸೇರಲಿದ್ದಾರೆಯೇ ನಿತೀಶ್ ಕುಮಾರ್?: ಕುತೂಹಲ ಸೃಷ್ಟಿಸಿದ ರಾಬ್ರಿ ದೇವಿ ಹೇಳಿಕೆ

Update: 2019-06-04 11:29 GMT

ಹೊಸದಿಲ್ಲಿ, ಜೂ.4: “ಮುಖ್ಯಮಂತ್ರಿ ನಿತೀಶ್ ಕುಮಾರ್  ಮತ್ತೊಮ್ಮೆ ಮಹಾಮೈತ್ರಿ ಕೂಟ ಸೇರಲು ಬಯಸಿದರೆ ಅದಕ್ಕೆ ನಮ್ಮ ಆಕ್ಷೇಪವೇನೂ ಇಲ್ಲ'' ಎಂದು  ಆರ್‍ ಜೆಡಿ ನಾಯಕಿ ರಾಬ್ರಿ ದೇವಿ ಹೇಳಿದ್ದಾರೆ.

ಆದರೆ ನಿತೀಶ್ ಕುಮಾರ್  ಮಹಾಮೈತ್ರಿ ಸೇರಲು ಬಯಸಿದಲ್ಲಿ ಅದಕ್ಕೆ ಅನುಮೋದನೆ ನೀಡುವ ನಿರ್ಧಾರವನ್ನು ಆರ್‍ ಜೆಡಿಯ ಹಿರಿಯ ನಾಯಕರು ಕೈಗೊಳ್ಳಲಿದ್ದಾರೆಂದು ಅವರು ತಿಳಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಹಿರಿಯ ಆರ್‍ ಜೆಡಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ರಘುವಂಶ್ ಪ್ರಸಾದ್ ಸಿಂಗ್,  ಪ್ರಧಾನಿ ಮೋದಿಯ ಎರಡನೇ ಆಡಳಿತಾವಧಿಯಲ್ಲಿ ಬದಲಾದ ಪರಿಸ್ಥಿತಿಯಲ್ಲಿ ನಿತೀಶ್ ಕುಮಾರ್ ಮರಳಿ ಮಹಾಮೈತ್ರಿಗೆ ಬರಲು ಇಚ್ಛಿಸಿದರೆ ಆರ್‍ ಜೆಡಿ ಅದಕ್ಕೆ ತೆರೆದ ಮನಸ್ಸು ಹೊಂದಿರಬೇಕೆಂದು ಹೇಳಿದ್ದಾರೆ.

“ಅವರು (ನಿತೀಶ್ ಕುಮಾರ್) ಖಂಡಿತವಾಗಿಯೂ ತಮ್ಮ ನಿಲುವನ್ನು ಬದಲಾಯಿಸುತ್ತಾರೆ. ಆದರೆ ಯಾವಾಗ ಎಂದು ಹೇಳುವುದು ಕಷ್ಟ. ಇದು ಈ ಹಿಂದೆಯೂ ಹಲವಾರು ಬಾರಿ ಆಗಿದೆ. ಅದರಲ್ಲಿ ಅಚ್ಚರಿಯಿಲ್ಲ. ಎಲ್ಲರೂ ಬಿಜೆಪಿ ಎದುರು ಜತೆಯಾಗಬೇಕು'' ಎಂದು ಸಿಂಗ್ ಹೇಳಿದ್ದಾರೆ.

ನಿತೀಶ್ ಕುಮಾರ್  ಅವರ ಜೆಡಿಯು ತಾನು ಸ್ಪರ್ಧಿಸಿದ್ದ 17 ಲೋಕಸಭಾ ಸ್ಥಾನಗಳ ಪೈಕಿ 16ರಲ್ಲಿ ಗೆಲುವು ಸಾಧಿಸಿದ್ದರೆ ಬಿಜೆಪಿ ಎಲ್ಲಾ 17ರಲ್ಲಿ ಜಯ ಗಳಿಸಿತ್ತು.

ನಿತೀಶ್ ಅವರು ಜುಲೈ 2017ರಲ್ಲಿ ಮಹಾಮೈತ್ರಿ ತೊರೆದ ನಂತರ ಲಾಲು ಯಾದವ್ ಅವರು ಮೇವು ಹಗರಣ ಪ್ರಕರಣಗಳಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.  ಪಕ್ಷಕ್ಕೆ ಈ ಬಾರಿ ಕೇವಲ ಒಂದು ಕ್ಯಾಬಿನೆಟ್ ಸ್ಥಾನ ನೀಡಲು ಎನ್‍ ಡಿಎ ನಿರ್ಧರಿಸಿದ್ದನ್ನು ವಿರೋಧಿಸಿ ಜೆಡಿಯು ಈ ಬಾರಿ ಕೇಂದ್ರದ ಮೋದಿ ಸರಕಾರದ ಸಚಿವ ಸಂಪುಟದಿಂದ ಹೊರಗುಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News