ಬಿಜೆಪಿಯನ್ನು ಮಣಿಸಲು ರಾಜಕೀಯ ತಂತ್ರಗಾರಿಕೆ ನಿಪುಣನ ಮೊರೆ ಹೋದ ದೀದಿ !

Update: 2019-06-06 15:32 GMT

ಹೊಸದಿಲ್ಲಿ, ಜೂ.6: ಪಶ್ಚಿಮ ಬಂಗಾಳದಲ್ಲಿ ತನ್ನ ಬೇರುಗಳನ್ನು ಭದ್ರಪಡಿಸಿಕೊಳ್ಳುತ್ತಿರುವ ಬಿಜೆಪಿಯನ್ನು ನಿಗ್ರಹಿಸಲು ವ್ಯೂಹರಚಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 2021ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್ ನೆರವು ಪಡೆಯಲು ನಿರ್ಧರಿಸಿದ್ದಾರೆ.

ಇತ್ತೀಚೆಗೆ ನಡೆದ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ವೈಆರ್‌ಎಸ್ ಪಕ್ಷದ ವೈಎಸ್ ಜಗನ್‌ಮೋಹನ್ ರೆಡ್ಡಿ ಪರ ಕೆಲಸ ಮಾಡಿದ್ದರು. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳನ್ನು ಬದಿಗೊತ್ತಿದ್ದ ಟಿಎಂಸಿಯ ಮಮತಾ ಬ್ಯಾನರ್ಜಿಗೆ ಸೆಡ್ಡು ಹೊಡೆದಿರುವ ಬಿಜೆಪಿ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ 18 ಸ್ಥಾನದಲ್ಲಿ ಗೆದ್ದಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಕೇವಲ 2 ಸ್ಥಾನ ಗೆದ್ದಿತ್ತು.

2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಪ್ರಚಾರ ಕಾರ್ಯದಲ್ಲಿ ಕಿಶೋರ್ ನೆರವಾಗಿದ್ದರು. ಆದರೆ 2017ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಸಮಾಜವಾದಿ ಪಕ್ಷದ ಪರ ಕೆಲಸ ಮಾಡಿದ್ದ ಕಿಶೋರ್ ಯಾವುದೇ ಮ್ಯಾಜಿಕ್ ತೋರಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ಸೇರ್ಪಡೆಗೊಂಡಿದ್ದ ಕಿಶೋರ್‌ರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News