ಅಂಪೈರ್ ನಿರ್ಲಕ್ಷ್ಯ: ಫ್ರೀ-ಹಿಟ್‌ಗೆ ಔಟಾದ ಕ್ರಿಸ್ ಗೇಲ್!

Update: 2019-06-07 06:06 GMT

ನಾಟಿಂಗ್‌ಹ್ಯಾಮ್, ಜೂ.7: ಆಸ್ಟ್ರೇಲಿಯ ವಿರುದ್ಧ ಐಸಿಸಿ ವಿಶ್ವಕಪ್ ಕ್ರಿಕೆಟ್‌ನಲ್ಲಿ ಗುರುವಾರ ವೆಸ್ಟ್‌ಇಂಡೀಸ್ ಆರಂಭಿಕ ಆಟಗಾರ ಕ್ರಿಸ್ ಗೇಲ್ ವಿವಾದಾತ್ಮಕ ಸನ್ನಿವೇಶದಲ್ಲಿ ಔಟಾಗಿದ್ದಾರೆ.

 ವಿಂಡೀಸ್ ಇನಿಂಗ್ಸ್‌ನ 4.5 ಓವರ್‌ನಲ್ಲಿ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಬೀಸಿದ ಎಲ್ಬಿಡಬ್ಲು ಬಲೆಗೆ ಗೇಲ್ ಔಟಾದರು. ಗೇಲ್ ಅಂಪೈರ್ ತೀರ್ಪು ಪರಾಮರ್ಶೆ ಪದ್ಧತಿ(ಡಿಆರ್‌ಎಸ್) ಮೊರೆ ಹೋದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ, ಗೇಲ್ ಔಟಾಗಿರುವುದು ಫ್ರೀ-ಹಿಟ್‌ನಲ್ಲಿ ಎಂಬ ವಿಚಾರ ಟಿವಿ ರಿಪ್ಲೇಯಲ್ಲಿ ಬೆಳಕಿಗೆ ಬಂದಿದೆ.

ಸ್ಟಾರ್ಕ್ 4.4ನೇ ಓವರ್‌ನಲ್ಲಿ ಎಸೆದ ಚೆಂಡು ನೋ-ಬಾಲ್ ಆಗಿತ್ತು. ಹಾಗಾಗಿ 4.5ನೇ ಎಸೆತ ಫ್ರೀ ಹಿಟ್ ಆಗಿರಬೇಕಾಗಿತ್ತು. ಆದರೆ, ಸ್ಟಾರ್ಕ್ ಗೆರೆ ದಾಟಿ ಬೌಲಿಂಗ್ ಮಾಡಿದ್ದನ್ನು ಫೀಲ್ಡ್ ಅಂಪೈರ್ ಗಮನಿಸದೇ ನಿರ್ಲಕ್ಷ್ಯವಹಿಸಿದರು. ಇದರಿಂದ ಗೇಲ್‌ಗೆ ನಷ್ಟವಾಗಿದೆ.

ಸ್ಟಾರ್ಕ್, ಗೇಲ್‌ರನ್ನು ಔಟ್ ಮಾಡುವ ಹಿಂದಿನ ಎಸೆತದಲ್ಲಿ ನೋ-ಬಾಲ್ ಎಸೆದಿರುವುದು ಟಿವಿ ರಿಪ್ಲೇಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

ಗೇಲ್ ಫ್ರೀ-ಹಿಟ್‌ಗೆ ಔಟಾಗುವ ಮೊದಲು 3ನೇ ಓವರ್‌ನಲ್ಲಿ ಎರಡು ಬಾರಿ ಔಟಾಗುವುದರಿಂದ ಬಚಾವಾಗಿದ್ದರು. ಮೊದಲಿಗೆ 2.5 ಓವರ್‌ನಲ್ಲಿ ಸ್ಟಾರ್ಕ್ ಎಸೆತ ಸ್ಟಂಪ್‌ಗೆ ಬಡಿದರೂ, ಬೇಲ್ಸ್ ಬೀಳಲಿಲ್ಲ. ಆಗ ಗೇಲ್ ಡಿಆರ್‌ಎಸ್ ಮೊರೆ ಹೋಗಿ ಔಟಾಗುವುದರಿಂದ ಪಾರಾದರು. ಅದೇ ಓವರ್‌ನಲ್ಲಿ ವಿಕೆಟ್ ಹಿಂದುಗಡೆ ಕ್ಯಾಚ್ ಔಟ್ ಮನವಿಯಿಂದಲೂ ಗೇಲ್ ಪಾರಾದರು. ಆದರೆ, ಅವರು ಮೂರನೇ ಬಾರಿ ಅಂಪೈರ್ ಯಡವಟ್ಟಿನಿಂದ ಔಟಾದರು.

 ಕ್ರಿಕೆಟ್ ಪಂಡಿತರು ಹಾಗೂ ಅಭಿಮಾನಿಗಳು ಕಳಪೆ ಅಂಪೈರಿಂಗ್ ಮಾಡಿರುವ ರುಚಿರ ಪಲ್ಲಿಯಗುರುಗೆ ಹಾಗೂ ಕ್ರಿಸ್ ಗಫಾನೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವೆಸ್ಟ್‌ಇಂಡೀಸ್ ಬೌಲಿಂಗ್ ದಂತಕತೆ ಮೈಕಲ್ ಹೋಲ್ಡಿಂಗ್ ಅಂಪೈರ್‌ನ್ನು ಕಳಪೆ ನಿರ್ವಹಣೆಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಎಡಗೈ ದಾಂಡಿಗ ಗೇಲ್ ಆಸೀಸ್ ವಿರುದ್ಧ ಆಡಿದ್ದ ತನ್ನ 2ನೇ ವಿಶ್ವಕಪ್ ಪಂದ್ಯದಲ್ಲಿ 21 ರನ್‌ಗೆ ಔಟಾದರು. ಈ ಪಂದ್ಯವನ್ನು ವಿಂಡೀಸ್ 15 ರನ್‌ಗಳಿಂದ ಸೋತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News