×
Ad

ಸಂಪುಟ ವಿಸ್ತರಣೆಗೆ ಜೂ.12ಕ್ಕೆ ಮುಹೂರ್ತ ನಿಗದಿ

Update: 2019-06-08 12:57 IST

ಬೆಂಗಳೂರು, ಜೂ. 8: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಖಾಲಿ ಇರುವ ಮೂರು ಸಚಿವ ಸ್ಥಾನಗಳ ಭರ್ತಿಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಜೂ. 12ಕ್ಕೆ ಸಂಪುಟ ವಿಸ್ತರಣೆ ನಡೆಯಲಿದೆ.

ಶನಿವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಸಮಯ ನಿಗದಿಗೆ ಕೋರಿದ್ದರು. ಹೀಗಾಗಿ ‘ರಾಜ್ಯಪಾಲರು ಜೂ.12ರ ಬೆಳಗ್ಗೆ 11.30ಕ್ಕೆ ಸಂಪುಟ ವಿಸ್ತರಣೆಗೆ ಸಮಯ ನಿಗದಿಪಡಿಸಿದ್ದಾರೆ’ ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಸಚಿವ ಸಂಪುಟಕ್ಕೆ ನೂತನವಾಗಿ ಯಾರ್ಯಾರು ಸೇರ್ಪಡೆಯಾಗಲಿದ್ದಾರೆಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆದರೆ, ಪಕ್ಷೇತರ ಶಾಸಕರಾದ ರಾಣೆಬೆನ್ನೂರು ಕ್ಷೇತ್ರದ ಆರ್.ಶಂಕರ್ ಹಾಗೂ ಮುಳಬಾಗಿಲು ಕ್ಷೇತ್ರದ ನಾಗೇಶ್ ಸಂಪುಟಕ್ಕೆ ಸೇರ್ಪಡೆ ಆಗುವುದು ಬಹುತೇಕ ಖಚಿತವಾಗಿದೆ.

ಇದೇ ವೇಳೆ ಕುಂದಗೋಳ ಶಾಸಕ ಶಿವಳ್ಳಿ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಹಿರಿಯರಾದ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದರು.

ಕಾಂಗ್ರೆಸ್ ಪಕ್ಷದಲ್ಲಿ ರೋಷನ್‌ಬೇಗ್, ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಡಾ.ಕೆ.ಸುಧಾಕರ್, ಅಜಯ್ ಸಿಂಗ್, ವಿ.ಮುನಿಯಪ್ಪ, ಸಂಗಮೇಶ್, ಭೀಮಾನಾಯ್ಕಿ ಸೇರಿ ಹಲವು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಈ ಮಧ್ಯೆ ರೋಷನ್‌ಬೇಗ್, ರಾಮಲಿಂಗಾರೆಡ್ಡಿ ಹಾಗೂ ರಮೇಶ್ ಜಾರಕಿಹೊಳಿ ಪಕ್ಷ ಹಾಗೂ ಮುಖಂಡರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷ ಹಾಗೂ ಮೈತ್ರಿ ಸರಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸಿದ್ದಾರೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಯಾರಿಗೆ ಸಚಿವ ಸ್ಥಾನ ನೀಡಲಿದ್ದಾರೆಂಬುದು ಕುತೂಹಲ ಸೃಷ್ಟಿಸಿದೆ.

ಒಟ್ಟಾರೆ 224 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್-79(ಸ್ಪೀಕರ್ ಸೇರಿ), ಜೆಡಿಎಸ್-38(ಬಿಎಸ್ಪಿ ಶಾಸಕ ಸೇರಿ), ಬಿಜೆಪಿ-105, ಪಕ್ಷೇತರ-2. ಪಕ್ಷೇತರರು ಸೇರಿದಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ 119 ಸದಸ್ಯರ ಸಂಖ್ಯಾಬಲವಿದೆ. ಪಕ್ಷೇತರರಿಗೆ ಸಚಿವ ಸ್ಥಾನ ನೀಡುವ ಮೂಲಕ ಅವರನ್ನು ತನ್ನ ತೆಕ್ಕೆಯಲ್ಲಿಟ್ಟುಕೊಳ್ಳಲು ಮೈತ್ರಿ ಮುಖಂಡರು ರಣತಂತ್ರ ರೂಪಿಸಿದ್ದಾರೆಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News