ದೇಶದಲ್ಲಿಯೇ ಮೊದಲ ಬಾರಿಗೆ ಡ್ರೋನ್ ಮೂಲಕ ಉತ್ತರಾಖಂಡದ ಹಳ್ಳಿಯಿಂದ ಜಿಲ್ಲಾಸ್ಪತ್ರೆಗೆ ರಕ್ತ ಸಾಗಾಟ

Update: 2019-06-08 13:07 GMT
ಚಿತ್ರ ಕೃಪೆ: ANI 

ಡೆಹ್ರಾಡೂನ್ : ದೇಶದಲ್ಲಿಯೇ ಮೊದಲ ಬಾರಿಗೆ ಡ್ರೋನ್ ಮೂಲಕ ಉತ್ತರಾಖಂಡದ ತೆಹ್ರಿ ಜಿಲ್ಲೆಯ ನಂದಗಾಂವ್ ಎಂಬ ಹಳ್ಳಿಯೊಂದರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ  ಜಿಲ್ಲಾಸ್ಪತ್ರೆಯ ರಕ್ತ ಬ್ಯಾಂಕ್ ಗೆ ಒಂದು ಯುನಿಟ್ ರಕ್ತವನ್ನು ಸಾಗಿಸಲಾಗಿದೆ. 

ರಕ್ತವನ್ನು ಸಾಗಿಸಲು ಡ್ರೋನ್ ಬಳಕೆಯನ್ನು ಪ್ರಾಯೋಗಿಕವಾಗಿ ಮಾಡಿದ ಪ್ರಥಮ  ರಾಜ್ಯ ಉತ್ತರಾಖಂಡ ಆಗಿದೆ ಎಂದು ಐಐಟಿ ಕಾನ್ಪುರ್ ಇಲ್ಲಿನ  ಹಳೆ ವಿದ್ಯಾರ್ಥಿ ನಿಖಿಲ್ ಉಪಾಧ್ಯೆ ಹೇಳಿದ್ದಾರೆ. ಅವರೀಗ ಸಿಡಿಸ್ಪೇಸ್ ರೊಬಾಟಿಕ್ಸ್ ಲಿಮಿಟೆಡ್ ಎಂಬ ಕಂಪೆನಿಯನ್ನು ನಡೆಸುತ್ತಿದ್ದಾರೆ.

ಆರೋಗ್ಯ ಸೇವಾ ಕ್ಷೇತ್ರದಲ್ಲಿ ಡ್ರೋನ್ ಗಳ ಬಳಕೆಯ ಹಿಂದೆ  ಜಿಲ್ಲಾ ಮ್ಯಾಜಿಸ್ಟ್ರೇಟ್ ಸಾರಿಕಾ ಅವರ ಪರಿಕಲ್ಪನೆಯಿದೆ ಎಂದು ತೆಹ್ರಿ ಜಿಲ್ಲಾಸ್ಪತ್ರೆಯ ಹಿರಿಯ ವೈದ್ಯ ಡಾ. ಎಸ್ ಎಸ್ ಪಂಗ್ತಿ ಹೇಳುತ್ತಾರೆ.

ರಕ್ತವನ್ನು ಡ್ರೋನ್ ಮೂಲಕ ನಂದಗಾಂವ್ ನಿಂದ 32 ಕಿಮೀ ದೂರವಿರುವ ತೆಹ್ರಿ ಜಿಲ್ಲಾಸ್ಪತ್ರೆಗೆ ಕೇವಲ 18 ನಿಮಿಷಗಳಲ್ಲಿ ಸಾಗಿಸಲಾಯಿತು. ರಸ್ತೆ ಮಾರ್ಗದಲ್ಲಿ ಸಂಚರಿಸುವುದಾದರೆ  50ರಿಂದ 60 ನಿಮಿಷಗಳು ಬೇಕು ಎಂದು ಡಾ. ಪಂಗ್ತಿ ಹೇಳಿದರು.

ಇಂತಹುದೇ ಕಾರ್ಯಗಳಿಗಾಗಿ ಮುಂದಿನ ವಾರಗಳಲ್ಲಿ ಡ್ರೋನ್ ಬಳಸಿ ಅವುಗಳ ಸಾಮರ್ಥ್ಯವನ್ನು ಪರೀಶೀಲಿಸಲಾಗುವುದು ಎಂದು ಅವರು ತಿಳಿಸಿದರು.

ಉಪಾಧ್ಯೆ ಅವರ ಸಂಸ್ಥೆ ಐಐಟಿ ಕಾನ್ಪುರ್ ಇಲ್ಲಿನ ಇನ್‍ಕ್ಯುಬೇಶನ್ ಸೆಂಟರ್ ನಲ್ಲಿ  ಇಂತಹ ಡ್ರೋನ್ ಅಭಿವೃದ್ಧಿ ಪಡಿಸಿದ್ದು ಇವುಗಳು  500 ಗ್ರಾಂನಷ್ಟು ತೂಕದ ವಸ್ತುಗಳನ್ನು 50 ಕಿಮೀ ದೂರ ಸಿಂಗಲ್ ಚಾರ್ಜ್ ನಲ್ಲಿ ಸಾಗಿಸುವ ಸಾಮರ್ಥ್ಯ ಹೊಂದಿವೆ.

"ಈ ಡ್ರೋನ್ ತಲಾ 50 ಎಂಎಲ್ ನ ನಾಲ್ಕು ರಕ್ತ ಯೂನಿಟ್ ಗಳನ್ನು ಅಗತ್ಯ  ಪರಿಕರಗಳೊಂದಿಗೆ ಸಾಮಾನ್ಯ ವಾತಾವರಣದಲ್ಲಿ ಸಾಗಿಸಬಹುದಾಗಿದೆ,'' ಎಂದು ಉಪಾಧ್ಯೆ ಹೇಳಿದ್ದಾರೆ. ಇಂತಹ ಡ್ರೋನ್ ಗಳನ್ನು ಸಿದ್ಧ ಪಡಿಸಲು ರೂ. 10 ಲಕ್ಷ ವೆಚ್ಚವಾಗುವುದು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News