‘ವಿದೇಶಿ’ಹಣೆಪಟ್ಟಿ ಹೊತ್ತಿರುವ ಕಾರ್ಗಿಲ್ ವೀರ ಸನಾವುಲ್ಲಾಗೆ ಕೊನೆಗೂ ಬಂಧನ ಕೇಂದ್ರದಿಂದ ಮುಕ್ತಿ

Update: 2019-06-08 15:27 GMT

ಗುವಾಹಟಿ,ಜೂ.8: ಕಳೆದ ತಿಂಗಳು ಅಸ್ಸಾಮಿನ ನ್ಯಾಯಾಧಿಕರಣದಿಂದ ‘ವಿದೇಶಿ ಪ್ರಜೆ’ ಎಂದು ಘೋಷಿಸಲ್ಪಟ್ಟಿದ್ದ ಕಾರ್ಗಿಲ್ ಯುದ್ಧದ ಅನುಭವಿ ಯೋಧ ಮುಹಮ್ಮದ್ ಸನಾವುಲ್ಲಾ ಶನಿವಾರ ಬಂಧನ ಕೇಂದ್ರದಿಂದ ಬಿಡುಗಡೆಗೊಂಡರು. ಗುವಾಹಟಿ ಉಚ್ಚ ನ್ಯಾಯಾಲಯವು ಶುಕ್ರವಾರ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ನ್ಯಾಯಾಲಯದ ನಿರ್ದೇಶದಂತೆ ಬಿಡುಗಡೆಯ ಬಳಿಕ ಸನಾವುಲ್ಲಾರನ್ನು ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಅಮೀನ್‌ಗಾಂವ್‌ನಲ್ಲಿರುವ ಕಾಮರೂಪ ಎಸ್‌ಪಿ ಕಚೇರಿಗೆ ಕರೆದೊಯ್ಯಲಾಗಿತ್ತು.

 ಸಂಜೆಯ ವೇಳೆಗೆ ಸನಾವುಲ್ಲಾರ ಕುಟುಂಬ ಸದಸ್ಯರು ಮತ್ತು ಹಿತೈಷಿಗಳು ಅವರನ್ನು ಕಾಮರೂಪ ಜಿಲ್ಲೆಯ ಬೋಕೊ ಪ್ರದೇಶದಲ್ಲಿರುವ ಮನೆಗೆ ಕರೆದೊಯ್ದರು ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಬೋಕೊದಲ್ಲಿರುವ ವಿದೇಶಿಯರ ನ್ಯಾಯಾಧಿಕರಣವು ಮೇ 23ರಂದು ಸನಾವುಲ್ಲಾ(52)ರನ್ನು ‘ವಿದೇಶಿ’ ಎಂದು ಘೋಷಿಸಿ ಗೋಲಪಾರಾದಲ್ಲಿರುವ ಬಂಧನ ಕೇಂದ್ರಕ್ಕೆ ರವಾನಿಸಿತ್ತು.

 ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಸನಾವುಲ್ಲಾ 2017ರಲ್ಲಿ ಸೇನೆಯಿಂದ ನಿವೃತ್ತರಾಗಿದ್ದು,2014ರಲ್ಲಿ ರಾಷ್ಟ್ರಪತಿಗಳ ಪದಕಕ್ಕೆ ಭಾಜನರಾಗಿದ್ದರು.

ಬೋಕೊದ ಕೊಲೊಹಿಕಾಶ ಗ್ರಾಮದ ನಿವಾಸಿಯಾಗಿರುವ ಸನಾವುಲ್ಲಾ ‘ವಿದೇಶಿ ’ಎಂದು ಘೋಷಿಸಲ್ಪಡುವ ಮುನ್ನ ಅಸ್ಸಾಂ ಬಾರ್ಡರ್ ಪೊಲೀಸ್‌ನಲ್ಲಿ ಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದರು ಮತ್ತು ಬಳಿಕ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News