ಭಾರತಕ್ಕೆ ಶಸ್ತ್ರಧಾರಿ ಡ್ರೋನ್‌ಗಳ ಮಾರಾಟ: ಅಮೆರಿಕದ ಟ್ರಂಪ್ ಆಡಳಿತದಿಂದ ಅನುಮೋದನೆ
ವಾಶಿಂಗ್ಟನ್, ಜೂ. 8: ಶಸ್ತ್ರಧಾರಿ ಡ್ರೋನ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕದ ಟ್ರಂಪ್ ಆಡಳಿತ ಅನುಮೋದನೆ ನೀಡಿದೆ. ಅದೇ ವೇಳೆ, ಸೇನಾ ದೃಷ್ಟಿಯಿಂದ ಮಹತ್ವದ್ದಾಗಿರುವ ಭಾರತ-ಪೆಸಿಫಿಕ್ ವಲಯದಲ್ಲಿನ ಸೇನಾ ಸಾಮರ್ಥ್ಯವನ್ನು ವೃದ್ಧಿಸುವುದಕ್ಕಾಗಿ ಸಮಗ್ರ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಮಾರಾಟ ಮಾಡುವ ಕೊಡುಗೆಯನ್ನೂ ಅಮೆರಿಕ ಭಾರತಕ್ಕೆ ನೀಡಿದೆ.
ಫೆಬ್ರವರಿ 14ರಂದು ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಪಾಕಿಸ್ತಾನದ ಭಯೋತ್ಪಾದಕರು ನಡೆಸಿದ ದಾಳಿ ಹಾಗೂ ಭಾರತ-ಪೆಸಿಫಿಕ್ ವಲಯದಲ್ಲಿ ಚೀನಾದ ಹೆಚ್ಚುತ್ತಿರುವ ಸೇನಾ ಉಪಸ್ಥಿತಿ ಹಾಗೂ ಆಕ್ರಮಣಾ ಮನೋಭಾವದ ಹಿನ್ನೆಲೆಯಲ್ಲಿ ಅಮೆರಿಕದ ಈ ನಿರ್ಧಾರವು ಮಹತ್ವ ಪಡೆದುಕೊಂಡಿದೆ.
ಟ್ರಂಪ್ ಆಡಳಿತವು ತನ್ನ ಶ್ರೇಷ್ಠ ರಕ್ಷಣಾ ತಂತ್ರಜ್ಞಾನಗಳನ್ನು ಭಾರತಕ್ಕೆ ನೀಡಲು ಸಿದ್ಧವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘‘ಶಸ್ತ್ರಧಾರಿ ಡ್ರೋನ್‌ಗಳನ್ನು ಭಾರತಕ್ಕೆ ಮಾರಾಟ ಮಾಡುವ ಪ್ರಸ್ತಾವಕ್ಕೆ ಅಮೆರಿಕ ಅಂಗೀಕಾರ ನೀಡಿದೆ. ಅದೇ ವೇಳೆ, ನಾವು ಸಮಗ್ರ ವಾಯು ಮತ್ತು ಕ್ಷಿಪಣಿ ರಕ್ಷಣಾ ತಂತ್ರಜ್ಞಾನವನ್ನೂ ಭಾರತಕ್ಕೆ ನೀಡಲು ಸಿದ್ಧರಾಗಿದ್ದೇವೆ’’ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು.
ಮೋದಿ, ಟ್ರಂಪ್ ಸಭೆಯ ವೇಳೆ ಕುದುರಿದ್ದ ಒಪ್ಪಂದ
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ 2017 ಜೂನ್‌ನಲ್ಲಿ ನಡೆದ ಸಭೆಯ ವೇಳೆ, ಗಾರ್ಡಿಯನ್ ಡ್ರೋನ್‌ಗಳ ಕಣ್ಗಾವಲು ಮಾದರಿಯನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಒಪ್ಪಿಕೊಂಡಿತ್ತು.
ಈಗ ಭಾರತ ಈ ವಿಷಯದಲ್ಲಿ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಗಿದೆ ಎಂದು ರಕ್ಷಣಾ ಉದ್ಯಮದ ಮೂಲವೊಂದು ಪಿಟಿಐಗೆ ಹೇಳಿದೆ.
ಒಂದು ವೇಳೆ ಈ ಒಪ್ಪಂದ ಕುದುರಿದರೆ, ಅದು 2.5 ಬಿಲಿಯ ಡಾಲರ್ (ಸುಮಾರು 17,350 ಕೋಟಿ ರೂಪಾಯಿ) ಮೊತ್ತದ್ದಾಗಬಹುದು ಎಂದು ರಕ್ಷಣಾ ಉದ್ಯಮ ಮೂಲವು ಅಂದಾಜಿಸಿದೆ.