ಬಾಹ್ಯಾಕಾಶಕ್ಕೇ ಪ್ರವಾಸ ಹೋಗುತ್ತೀರಾ?.. ಇಲ್ಲಿದೆ ಖರ್ಚಿನ ವಿವರ

Update: 2019-06-08 16:22 GMT

ವಾಶಿಂಗ್ಟನ್, ಜೂ. 8: ಮುಂದಿನ ವರ್ಷದಿಂದ ಪ್ರತಿ ವರ್ಷ ಎರಡು ಖಾಸಗಿ ಖಗೋಳ ಯಾನಗಳನ್ನು ಏರ್ಪಡಿಸಲಾಗುವುದು ಹಾಗೂ ಪ್ರತಿ ಯಾತ್ರೆಯು 30 ದಿನಗಳ ಅವಧಿಯದ್ದಾಗಿರುತ್ತದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಹೇಳಿದೆ.

ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ವನ್ನು ಪ್ರವಾಸಿಗರಿಗೆ ತೆರೆಯಲು ತಾನು ನಿರ್ಧರಿಸಿರುವುದಾಗಿ ನ್ಯಾಶನಲ್ ಏರೊನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (ನಾಸಾ) ಶುಕ್ರವಾರ ತಿಳಿಸಿದೆ.

ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು 2020ರಿಂದ ಪ್ರವಾಸಿಗರಿಗೆ ಮುಕ್ತಗೊಳಿಸಲಾಗುವುದು ಹಾಗೂ ಇದರ ವೆಚ್ಚವು ಪ್ರತಿ ರಾತ್ರಿಗೆ 35,000 ಡಾಲರ್ (ಸುಮಾರು 24.28 ಲಕ್ಷ ರೂಪಾಯಿ) ಎಂದು ಬಿಬಿಸಿ ವರದಿ ಮಾಡಿದೆ.

‘‘ವರ್ಷಕ್ಕೆ ಎರಡು ಬಾರಿ ನಡೆಯುವ ಈ ಎರಡು ಬಾಹ್ಯಾಕಾಶ ಯಾನಗಳು ಖಾಸಗಿಯವರ ಹಣದಿಂದ ನಡೆಯುವ ವಾಣಿಜ್ಯ ಉದ್ದೇಶದ ಹಾರಾಟವಾಗಿರುತ್ತವೆ’’ ಎಂದು ನಾಸಾ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.

 ಖಾಸಗಿ ಬಾಹ್ಯಾಕಾಶ ಯಾನಗಳಿಗಾಗಿ ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಲಾದ ಅಮೆರಿಕದ ಬಾಹ್ಯಾಕಾಶ ನೌಕೆಯೊಂದನ್ನು ಬಳಸಲಾಗುವುದು ಎಂದು ಅದು ಹೇಳಿದೆ.

ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಮತ್ತು ಬೋಯಿಂಗ್ ಕಂಪೆನಿಗಳು ಖಾಸಗಿ ಬಾಹ್ಯಾಕಾಶ ಯಾನಿಗಳನ್ನು ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಒಯ್ಯುತ್ತವೆ. ಸ್ಪೇಸ್ ಎಕ್ಸ್ ಕಂಪೆನಿಯು ಈ ಉದ್ದೇಶಕ್ಕಾಗಿ ‘ಡ್ರಾಗನ್ ಕ್ಯಾಪ್ಸೂಲ್’ ನೌಕೆಯನ್ನು ಬಳಸಿದರೆ, ಬೋಯಿಂಗ್ ಕಂಪೆನಿಯು ‘ಸ್ಟಾರ್‌ಲೈನರ್’ ಎಂಬ ಬಾಹ್ಯಾಕಾಶ ನೌಕೆಯೊಂದನ್ನು ನಿರ್ಮಿಸುತ್ತಿದೆ.

ಮೊದಲ ಬಾರಿಯೇನಲ್ಲ

ಆದಾಗ್ಯೂ, ಖಾಸಗಿ ವ್ಯಕ್ತಿಗಳು ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗುವುದು ಇದೇನೂ ಮೊದಲ ಬಾರಿಯಲ್ಲ.

 2001ರಲ್ಲಿ, ಅಮೆರಿಕದ ಉದ್ಯಮಿ ಡೆನಿಸ್ ಟಿಟೊ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ಮೊದಲ ಪ್ರವಾಸಿಯಾಗಿದ್ದಾರೆ. ಅದಕ್ಕಾಗಿ ಅವರು ರಶ್ಯಕ್ಕೆ 20 ಮಿಲಿಯ ಡಾಲರ್ (ಸುಮಾರು 139 ಕೋಟಿ ರೂಪಾಯಿ) ನೀಡಿದ್ದರು.

ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು 1998ರಲ್ಲಿ ಅಮೆರಿಕ, ರಶ್ಯ, ಜಪಾನ್, ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಮತ್ತು ಕೆನಡಿಯನ್ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News