×
Ad

ಫಿಲಿಪ್ಪೀನ್ಸ್ ನಲ್ಲಿ ಬರಗಾಲ | 53 ವರ್ಷದ ಹಿಂದೆ ಮುಳುಗಿದ್ದ ಹಳ್ಳಿ ಪ್ರತ್ಯಕ್ಷ

Update: 2024-04-29 21:05 IST

ಸಾಂದರ್ಭಿಕ ಚಿತ್ರ | PC : NDTV

ಮನಿಲಾ : ದೀರ್ಘಾವಧಿಯ ಬರಗಾಲದಿಂದ ತತ್ತರಿಸಿರುವ ಉತ್ತರ ಫಿಲಿಪ್ಪೀನ್ಸ್ ನಲ್ಲಿ ಅಣೆಕಟ್ಟು ನಿರ್ಮಾಣ ಕಾಮಗಾರಿಯಲ್ಲಿ ಮುಳುಗಿದ್ದ ಹಳ್ಳಿಯೊಂದು ಮತ್ತೆ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ.

ನ್ಯೂವ ಎಸಿಜಾ ಪ್ರಾಂತದ ಪಂತಾಬಂಗನ್ ಅಣೆಕಟ್ಟು ನಿರ್ಮಾಣದ ಸಂದರ್ಭ ನೀರಿನಲ್ಲಿ ಈ ಹಳ್ಳಿ ಮುಳುಗಡೆಯಾಗಿತ್ತು. ಇದೀಗ ಈ ಪ್ರಾಂತದಲ್ಲಿ ದೀರ್ಘಾವಧಿಯಿಂದ ಮುಂದುವರಿದಿರುವ ಬರಗಾಲದ ಹಿನ್ನೆಲೆಯಲ್ಲಿ ಈ ಹಿಂದಿನ ವಸಾಹತಿನ ಹಲವು ಭಾಗಗಳು ಕ್ರಮೇಣ ಗೋಚರಕ್ಕೆ ಬಂದಿದ್ದು ಒಂದು ಚರ್ಚ್, ಸಮಾಧಿ ಕಲ್ಲುಗಳು ಬತ್ತಿಹೋಗಿರುವ ಜಲಾನಯನ ಪ್ರದೇಶದಲ್ಲಿ ಕಾಣಿಸಿಕೊಂಡಿವೆ. ಅಣೆಕಟ್ಟೆಯ ನೀರಿನ ಮಟ್ಟ ಸಾಮಾನ್ಯಕ್ಕಿಂತ ಸುಮಾರು 50 ಮೀಟರ್ ಕೆಳಮಟ್ಟಕ್ಕೆ ಕುಸಿದಿದೆ. ನ್ಯೂವ ಎಸಿಜಾ ಸೇರಿದಂತೆ ಫಿಲಿಪ್ಪೀನ್ಸ್ ನ ಸುಮಾರು 50%ದಷ್ಟು ಪ್ರದೇಶದಲ್ಲಿ ಬರಗಾಲದ ಸ್ಥಿತಿಯಿದೆ. ಬಿಸಿಗಾಳಿಯಿಂದಾಗಿ ದೇಶದ ಪ್ರಮುಖ ದ್ವೀಪವಾದ ಲುಝಾನ್‍ನಲ್ಲಿ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿದೆ. ದೇಶದಲ್ಲಿ 13 ವಿದ್ಯುತ್ ಸ್ಥಾವರಗಳನ್ನು ಮುಚ್ಚಲಾಗಿದೆ. ಸರಕಾರಿ ಶಾಲೆಗಳು ಆನ್‍ಲೈನ್ ಮೂಲಕ ತರಗತಿ ನಡೆಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಎಲ್‍ನಿನೊದ ಪರಿಣಾಮ ಇದಾಗಿದ್ದು ರಾಜಧಾನಿ ವಲಯದಲ್ಲಿ ಮುಂದಿನ ಮೂರು ದಿನ ತಾಪಮಾನ 37 ಡಿಗ್ರಿ ಸೆಲ್ಶಿಯಸ್‍ಗೆ ತಲುಪಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News