ಗುಪ್ತಚರ ಮುಖ್ಯಸ್ಥರನ್ನು ವಜಾಗೊಳಿಸಿದ ಲಂಕಾ ಅಧ್ಯಕ್ಷ

Update: 2019-06-08 16:17 GMT

ಕೊಲಂಬೊ, ಜೂ. 8: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ದೇಶದ ಗುಪ್ತಚರ ಮುಖ್ಯಸ್ಥರನ್ನು ವಜಾಗೊಳಿಸಿದ್ದಾರೆ ಹಾಗೂ ಈಸ್ಟರ್ ದಿನದ ಆತ್ಮಹತ್ಯಾ ಸರಣಿ ಬಾಂಬ್ ದಾಳಿಗಳ ಮುಂಚಿನ ಭದ್ರತಾ ಲೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ಸಂಸದೀಯ ಸಮಿತಿಗೆ ಸಹಕಾರ ನೀಡದಿರಲು ನಿರ್ಧರಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಎಪ್ರಿಲ್ 21ರಂದು ದೇಶವನ್ನು ನಡುಗಿಸಿದ ಭಯೋತ್ಪಾದಕ ದಾಳಿಗಳ ಬಗ್ಗೆ ಸಂಸದೀಯ ಸಮಿತಿಯೊಂದು ತನಿಖೆ ನಡೆಸುವುದನ್ನು ವಿರೋಧಿಸುವುದಕ್ಕಾಗಿ ಅಧ್ಯಕ್ಷರು ಶುಕ್ರವಾರ ರಾತ್ರಿ ತುರ್ತು ಸಂಪುಟ ಸಭೆಯೊಂದನ್ನು ಕರೆದರು.

ಸರಣಿ ಆತ್ಮಹತ್ಯಾ ಬಾಂಬ್ ದಾಳಿಗಳಲ್ಲಿ 45 ವಿದೇಶಿಯರು ಸೇರಿದಂತೆ 258 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಸುಮಾರು 500 ಮಂದಿ ಗಾಯಗೊಂಡಿದ್ದಾರೆ.

ಕಳೆದ ವಾರ ಸಂಸದೀಯ ತನಿಖಾ ಸಮಿತಿಯ ಮುಂದೆ ಹೇಳಿಕೆ ನೀಡಿದ್ದ ರಾಷ್ಟ್ರೀಯ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಸಿಸಿರ ಮೆಂಡಿಸ್, ಭಯೋತ್ಪಾದಕ ದಾಳಿಗಳನ್ನು ತಡೆಯಬಹುದಾಗಿತ್ತು ಎಂದು ಹೇಳಿದ್ದರು. ಆ ಬಳಿಕ, ಈಗ ಅವರನ್ನು ವಜಾಗೊಳಿಸಲಾಗಿದೆ.

ಭಯೋತ್ಪಾದಕರು ಒಡ್ಡಿದ್ದ ಬೆದರಿಕೆಯ ಬಗ್ಗೆ ವಿಶ್ಲೇಷಣೆ ನಡೆಸುವುದಕ್ಕಾಗಿ ನಿಯಮಿತವಾಗಿ ಭದ್ರತಾ ಸಭೆಗಳನ್ನು ಅಧ್ಯಕ್ಷರು ನಡೆಸುತ್ತಿರಲಿಲ್ಲ ಎಂಬುದಾಗಿಯೂ ಗುಪ್ತಚರ ಇಲಾಖೆಯ ಮುಖ್ಯಸ್ಥರು ಹೇಳಿದ್ದರು.

ಆದರೆ, ಗುಪ್ತಚರ ಮುಖಸ್ಥರ ವಜಾಕ್ಕೆ ಅಧ್ಯಕ್ಷರ ಕಚೇರಿ ಯಾವುದೇ ಕಾರಣ ನೀಡಿಲ್ಲ.

ಗುಪ್ತಚರ ಮುಖ್ಯಸ್ಥರು ಸಂಸದೀಯ ತನಿಖಾ ಸಮಿತಿಯ ಮುಂದೆ ನೀಡುತ್ತಿದ್ದ ಹೇಳಿಕೆ ಟಿವಿಯಲ್ಲಿ ನೇರಪ್ರಸಾರಗೊಳ್ಳುತ್ತಿತ್ತು. ಆದರೆ, ಅಧ್ಯಕ್ಷರ ಆದೇಶದ ಮೇರೆಗೆ, ನೇರಪ್ರಸಾರವನ್ನು ಅರ್ಧದಲ್ಲೇ ನಿಲ್ಲಿಸಲಾಗಿತ್ತು.

ಅದೇ ವೇಳೆ, ಸಂಸದೀಯ ಸಮಿತಿಯ ಮುಂದೆ ಯಾವುದೇ ಪೊಲೀಸ್, ಸೇನಾ ಅಥವಾ ಗುಪ್ತಚರ ಸಿಬ್ಬಂದಿ ಹೇಳಿಕೆ ನೀಡಬಾರದು ಎಂಬ ಆದೇಶವನ್ನೂ ಸಿರಿಸೇನ ಹೊರಡಿಸಿದ್ದಾರೆ ಎಂಬುದಾಗಿ ಮೂಲವೊಂದು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ.

ಸಂಸದೀಯ ತನಿಖೆಯನ್ನು ರದ್ದುಪಡಿಸಬೇಕೇ ಎಂಬ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ ಸಂಪುಟ ಸಭೆಯು ಮೊಟಕುಗೊಂಡಿತು ಎಂದು ಮೂಲವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News