ಅಜ್ಜಿ ಹೇಳಿದ ಮುಹೂರ್ತದಲ್ಲಿ 'ಮಜ್ಜಿಗೆ ಹುಳಿ'!

Update: 2019-06-08 17:59 GMT

ಪ್ರೀತಿಯನ್ನು ಹಸಿರಾಗಿ ಮತ್ತು ಕಾಮವನ್ನು ಮಾಂಸವಾಗಿ ಕಾಣುವವರು ‘ವೆಜ್ -ನಾನ್ ವೆಜ್’ ಎನ್ನುವ ಕಲ್ಪನೆಯನ್ನು ಸಿನೆಮಾಗಳಿಗೂ ಹರಡಿದ್ದಾರೆ. ಹಾಗಾಗಿ ಅಂಥವರ ಪ್ರಕಾರ ಮದುವೆ ಎಂದರೆ ವೆಜ್ ಮತ್ತು ಪ್ರಥಮ ರಾತ್ರಿಯನ್ನು ನಾನ್ ವೆಜ್ ಎನ್ನಲಾಗುತ್ತದೆ. ಹಾಗಾದರೆ ನಾನ್ ವೆಜ್ ಆಗಿರಬೇಕಾದ ಪ್ರಥಮ ರಾತ್ರಿಯಲ್ಲಿ ಮಜ್ಜಿಗೆ ಹುಳಿಗೇನು ಕೆಲಸ ಎನ್ನುವುದನ್ನು ತೋರಿಸಿರುವ ಚಿತ್ರವೇ ಇದು.

ಚಿತ್ರದಲ್ಲಿ ಕಾರ್ತಿಕ್ ಸಾಫ್ಟ್‌ವೇರ್ ಕಂಪೆನಿಯ ಉದ್ಯೋಗಿ. ಆದರೆ ಇದು ಪ್ರಥಮ ರಾತ್ರಿಯ ಕತೆಯಾದ ಕಾರಣ ಆತನ ಸಾಫ್ಟ್‌ವೇರ್ ಕಾರ್ಯವೈಖರಿಗಳ ಪರಿಚಯವಾಗುವುದಿಲ್ಲ. ಆದರೆ ಸಾಫ್ಟ್ ನೇಚರ್ ವ್ಯಕ್ತಿ ಎನ್ನುವುದು ಸಾಬೀತಾಗುತ್ತದೆ. ಅದಕ್ಕೆ ಕಾರಣ ಮೊದಲ ರಾತ್ರಿಯ ನಿರೀಕ್ಷೆಯಲ್ಲಿದ್ದರೂ, ಮುಂಜಾನೆ ತನಕ ಅದಕ್ಕೆ ಆಗುವ ಅಡ್ಡಿಗಳನ್ನು ಸಾಕಷ್ಟು ಸಹನೆಯಿಂದಲೇ ಎದುರಿಸುತ್ತಾನೆ ಎನ್ನುವುದು ವಿಶೇಷ.
  
ಅದಕ್ಕೆ ತಕ್ಕಂತೆ ಹಾಲಿನೊಂದಿಗೆ ಕೋಣೆಯೊಳಗೆ ಕಾಲಿಡುವ ಆತನ ಪತ್ನಿ ವೈಶಾಲಿ. ಮುಗ್ಧನಂತೆ ಕಾಣುವ ಕಾರ್ತಿಕ್ ಜತೆ ವೈಶಾಲಿ ತುಸು ಮುಂದುವರಿದವಳಂತೆ ಕಾಣುತ್ತಾಳೆ. ಮಾತ್ರವಲ್ಲ ಬಾಯಿ ಬಡುಕಿಯೂ, ಧೈರ್ಯವಂತೆಯೂ ಹೌದು. ಹಾಗಾಗಿಯೇ ಗೋವಾದ ಲಾಡ್ಜ್ ಒಂದರಲ್ಲಿ ನಡೆಯುವ ಅವರ ಪ್ರಸ್ಥದ ಕೋಣೆಯೊಳಗೆ ಅಪ್ರಸ್ತುತರೆನಿಸಿದವರೆಲ್ಲ ಭೇಟಿ ಕೊಡುತ್ತಿದ್ದರೆ ಆಕೆ ಪ್ರಫುಲ್ಲಿತೆಯಾಗಿಯೇ ಇರುತ್ತಾಳೆ! ಒಬ್ಬರ ಹಿಂದೆ ಒಬ್ಬರಂತೆ ರಾತ್ರಿ ಪೂರ್ತಿ ಆ ಕೋಣೆಯೊಳಗೆ ಹೊರಗಿನವರು ಯಾಕೆ ಬಂದರು ಎನ್ನುವುದಕ್ಕೆ ಕೊನೆಗೊಂದು ಸಣ್ಣ ಲಾಜಿಕ್ ಇದೆ. ಆದರೆ ಅದು ಎಲ್ಲರಿಗೂ ಅನ್ವಯಿಸುವುದಿಲ್ಲ. ಕತೆಗೆ ಸಂಬಂಧಿಸಿದಂತೆ ನೋಡುವುದಾದರೆ ಇದು ಒಂದು ಒಳ್ಳೆಯ ಪ್ರಯೋಗ. ರವಿಚಂದ್ರನ್ ಲಿಫ್ಟ್‌ನಲ್ಲಿ ‘ಅಪೂರ್ವ’ ಮಾಡಿದ ಹಾಗೆ, ಇವರು ಫಸ್ಟ್ ನೈಟ್ ಕೋಣೆಯಲ್ಲೇ ಪೂರ್ತಿ ಕತೆ ಮಾಡಿದ್ದಾರೆ.

ಇದು ರಂಗಭೂಮಿಗೆ ಹೇಳಿ ಮಾಡಿಸಿದ ಕತೆ. ಕಮರ್ಷಿಯಲ್ ಸಿನೆಮಾ ಎಂದು ಬಂದಾಗ ಪ್ರಸ್ಥದ ಕೋಣೆಯೊಳಗೆ ನಡೆಯಬಹುದಾದ ಗ್ಲಾಮರಸ್ ನಿರೀಕ್ಷೆಗಳಿಗೆ ಇಲ್ಲಿ ಮೇವು ಸಿಗುವುದಿಲ್ಲ. ಮೊದಲ ರಾತ್ರಿಯ ಆಸಕ್ತಿಯೇ ಇರದಂತೆ ಕಾಣುವ ವ್ಯಕ್ತಿತ್ವದ ಕಾರ್ತಿಕ್ ಪಾತ್ರದಲ್ಲಿ ದೀಕ್ಷಿತ್ ವೆಂಕಟೇಶ್ ನಿರಾಶೆ ಮೂಡಿಸುತ್ತಾರೆ. ವೈಶಾಲಿಯಾಗಿ ರೂಪಿಕಾ ಸಿಕ್ಕ ಪಾತ್ರವನ್ನು ಚೊಕ್ಕವಾಗಿ ಅಭಿನಯಿಸಿದ್ದಾರೆ ಬಿಟ್ಟರೆ ಪ್ರಥಮ ರಾತ್ರಿ ಸನ್ನಿವೇಶಕ್ಕೆ ಹೊಂದುವ ಹುಡುಗಿ ಎನಿಸುವುದಿಲ್ಲ.

ಹಾಗೆಂದು ಹಾಡು, ಪದ್ಯಬಂಡಿ, ಒಂದಷ್ಟು ಡಬಲ್ ಮೀನಿಂಗ್ ಸಂಭಾಷಣೆಗಳಿಗೆ ಕೊರತೆ ಇಲ್ಲ! ಅದನ್ನೇ ಶೃಂಗಾರಮಯವಾಗಿಸಿದ್ದರೆ ಪ್ರೇಕ್ಷಕ ಆಕಳಿಸುವುದು ತಪ್ಪುತ್ತಿತ್ತು. ರಮೇಶ್ ಭಟ್ ಅವರಂಥ ನಟನನ್ನು ಕೂಡ ಅವರ ರಸಿಕತೆಯ ಕತೆ ಹೇಳುವುದಕ್ಕೆ ಸೀಮಿತಗೊಳಿಸಿರುವುದು ವಿಪರ್ಯಾಸ. ಚಿತ್ರದಲ್ಲಿ ಪ್ರಸ್ಥದ ಆರಂಭಕ್ಕೆ ದಂಪತಿಯ ಅಜ್ಜಿ ಒಂದು ಸುಮುಹೂರ್ತವನ್ನು ತಿಳಿಸಿರುತ್ತಾರೆ. ಆದರೆ ಅದುವರೆಗೆ ಕಾಯುವ ವ್ಯವಧಾನ ಇರದ ಜೋಡಿಗಳು ಅನಿವಾರ್ಯವಾಗಿ ಅಷ್ಟು ಹೊತ್ತು ದೂರವಾಗಿ ಇರಬೇಕಾಗುತ್ತದೆ. ಆ ದೂರವಾಗುವಿಕೆಯಿಂದ ಉಂಟಾದ ಲಾಭವೇನು ಎನ್ನುವುದು ಕೊನೆಯಲ್ಲಿ ತಿಳಿಯುತ್ತದೆ. ಚಿತ್ರದಲ್ಲಿ ಸಂದೇಶ ಹುಡುಕಲು ಕುಳಿತರೆ ಬಹುಶಃ ಅಜ್ಜಿ ಹೇಳುವ ಸಂಪ್ರದಾಯ ಪಾಲಿಸುವುದು ಮುಖ್ಯ ಎನ್ನುವುದೇ ಇರಬಹುದು! ಯಾಕೆಂದರೆ ಅಮೂಲ್ಯವಾದ ಎರಡು ಗಂಟೆಗಳಲ್ಲಿ ಯಾವುದೇ ಮೌಲ್ಯವಿರದ ಚಿತ್ರ ನೀಡಿರುವ ನಿರ್ದೇಶಕರು, ಗಾಂಧಿನಗರದ ಮಚ್ಚು ಪ್ರಿಯ ನಿರ್ದೇಶಕರಿಗೆ ಸಂದೇಶ ನೀಡಲು ಮರೆತಿಲ್ಲ! ರೈತರ ಕುರಿತಾದ ಚಿತ್ರ ಮಾಡುವಂತೆ ನಾಯಕಿಯ ಮೂಲಕ ಹೇಳಿಸಿರುವ ನಿರ್ದೇಶಕ ರವೀಂದ್ರ ಕೊಟಕಿ ತಾವು ಮಾತ್ರ ಸಿನೆಮಾ ಕ್ಷೇತ್ರದ ಕೃಷಿಯಲ್ಲಿ ಸಾಕಷ್ಟು ಪಳಗಬೇಕಿದೆ ಎಂದು ಚಿತ್ರದ ಮೂಲಕ ಸಾಬೀತು ಪಡಿಸಿದ್ದಾರೆ. ಒಟ್ಟಿನಲ್ಲಿ ಮಜ್ಜಿಗೆ ಹುಳಿ ಪ್ರೇಕ್ಷಕರ ಪಾಲಿಗೆ ಹುಳಿ ದ್ರಾಕ್ಷಿ.


ನಿರ್ದೇಶನ: ರವೀಂದ್ರ ಕೊಟಕಿ
ನಿರ್ಮಾಣ: ಎಸ್. ರಾಮಚಂದ್ರ
ತಾರಾಗಣ: ದೀಕ್ಷಿತ್ ವೆಂಕಟೇಶ್, ರೂಪಿಕಾ, ಸುಚೇಂದ್ರಪ್ರಸಾದ್, ರಮೇಶ್ ಭಟ್, ತರಂಗ ವಿಶ್ವ, ಕೆಂಪೇಗೌಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News